ದೊಡ್ಡಹುಲ್ಲೂರು ಕೆರೆಗಿಲ್ಲ ರಕ್ಷಣೆ; ಅಧಿಕಾರಿಗಳಿಗೆ ಜಾಣಕುರುಡು; ಪರಿಸರ ಪ್ರೇಮಿಗಳ ಕಳವಳ

14slb1
Published on

ವಿ.ಮಂಜುನಾಥ್ ಸೂಲಿಬೆಲೆ: ಹತ್ತಾರು ಗ್ರಾಮಗಳಿಗೆ ಜೀವಸೆಲೆಯಾಗಿದ್ದ ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು ಅಮಾನಿಕೆರೆ ನೀರಿಲ್ಲದೆ ತ್ಯಾಜ್ಯ ಸಂಗ್ರಹಣೆ ತಾಣವಾಗಿದೆ. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಕಂಡೂ ಕಾಣದವರಂತೆ ಇದ್ದಾರೆ.

300 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ದೊಡ್ಡಹುಲ್ಲೂರು, ಚಿಕ್ಕಹುಲ್ಲೂರು, ಹಲಸಹಳ್ಳಿ, ಯಲಚಹಳ್ಳಿ, ದಾಸರಹಳ್ಳಿ, ಪಿಲ್ಲಗುಂಪೆ, ಸೊಣ್ಣದೇನಹಳ್ಳಿ, ಮಲ್ಲಿಮಾಕನಪುರ, ದಾಸರಹಳ್ಳಿ, ಗೊಟ್ಟಿಪುರ ಸೇರಿ ಸುತ್ತಮುತ್ತಲಿನ ಹಳ್ಳಿಗಳ ರೈತರ ಬದುಕಿಗೆ ಆಸರೆಯಾಗಿತ್ತು.

ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಜತೆಗೆ ಕೆರೆ ಸಂರಕ್ಷಣೆ ನಿರ್ಲಕ್ಷ್ಯದಿಂದ ಮುಳ್ಳುಗಿಡಗಳೇ ತುಂಬಿಕೊಂಡಿವೆ. ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ತ್ಯಾಜ್ಯ, ರಾಸಾಯನಿಕ, ಪ್ಲಾಸ್ಟಿಕ್, ಗ್ರಾನೈಟ್ ಪೀಸ್‌ಗಳನ್ನು ಲೋಡ್‌ಗಟ್ಟಲೆ ತಂದು ಕೆರೆಗೆ ಸುರಿಯುತ್ತಿದ್ದು, ಕೆರೆ ನೆಲಸಮವಾಗುತ್ತಿದೆ.

ಕೆಲ ದಿನಗಳಲ್ಲಿ ಕೆಸಿ ವ್ಯಾಲಿ ನೀರು ಕೆರೆಗೆ ಹರಿಯಲಿದ್ದು, ನೀರು ಸಂಗ್ರಹಣೆಗೆ ಸಾಕಷ್ಟು ಅಡಚಣೆಯಾಗಲಿದೆ. ಜಿಲ್ಲಾಧಿಕಾರಿಗಳು ಕೆರೆಗಳ ಸಂರಕ್ಷಣೆಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ದೊಡ್ಡಹುಲ್ಲೂರು ಕೆರೆ ಬಗ್ಗೆ ಗಮನಹರಿಸಬೇಕಿದೆ.

ಕೆರೆಗೆ ತ್ಯಾಜ್ಯ ಸುರಿಯಬಾರದೆಂಬ ನಿಯಮವಿದ್ದರೂ, ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳು ತ್ಯಾಜ್ಯ ಸುರಿಯುತ್ತಿವೆ.

ಕೆರೆಗಳು ಇಂದು ಒತ್ತುವರಿಯಿಂದ ನಲುಗುತ್ತಿದ್ದರೆ, ಮತ್ತೊಂದೆಡೆ ಕೆರೆ ಒಡಲಿಗೆ ತ್ಯಾಜ್ಯ ತುಂಬುತ್ತಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ. ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಜರುಗಿಸಿ ಕೆರೆ ಸಂರಕ್ಷಣೆ ಮಾಡಬೇಕು. ಚಿಕ್ಕನಾರಾಯಣಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಹಲಸಹಳ್ಳಿ ಕೆರೆಗಳ ಸಂರಕ್ಷಣೆ ಬಗ್ಗೆ ನೀರಾವರಿ ಇಲಾಖೆ ಜತೆಗೆ ಸ್ಥಳೀಯ ಗ್ರಾಪಂ ಕೈಜೋಡಿಸಬೇಕು. ಕೆರೆಗೆ ತ್ಯಾಜ್ಯ ಸುರಿಯುವವರನ್ನು, ಮಣ್ಣು ಮಾಫಿಯಾ ಮಾಡುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವ ಕೆಲಸ ಮಾಡಲಾಗುವುದು. ಕೆರೆಯಲ್ಲಿ ಬೆಳೆದಿರುವ ಮರಗಳ ಕಟಾವಿಗೆ ಅರಣ್ಯ ಇಲಾಖೆಗೆ ನೋಟಿಸ್ ನೀಡಲಾಗಿದೆ. ಮಂಜುನಾಥ್, ಸಹಾಯಕ ಅಭಿಯಂತ, ಸಣ್ಣ ನೀರಾವರಿ ಇಲಾಖೆ. ಬೆಂ.ಗ್ರಾ.ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net