ದೊಡ್ಡಲತ್ತೂರು ಗ್ರಾಮದಲ್ಲಿ ಅತಿಕ್ರಮ ಜಾಗ ತೆರವು

Published on

ಹನೂರು: ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮಸ್ಥರಿಗೆ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಲು ದೊಡ್ಡಲತ್ತೂರು ಗ್ರಾಮದಲ್ಲಿ ಮಂಜೂರಾಗಿದ್ದ ಜಾಗ ಅತಿಕ್ರಮವಾಗಿದ್ದ ಹಿನ್ನೆಲೆಯಲ್ಲಿ ಬುಧವಾರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಕೆಂಪಯ್ಯನಹಟ್ಟಿ ಗ್ರಾಮಸ್ಥರು ಈ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ದೊಡ್ಡಲತ್ತೂರು ಗ್ರಾಮದ ಸರ್ವೇ ನಂ. 80ರಲ್ಲಿನ 3 ಎಕರೆ 96 ಸೆಂಟ್ ಜಾಗದ ಪೈಕಿ 20 ಸೆಂಟ್ ಅನ್ನು ಭವನ ನಿರ್ಮಾಣಕ್ಕೆ ಮಂಜೂರು ಮಾಡಲಾಗಿತ್ತು. ಆದರೆ ಗ್ರಾಮದ ಕೆಲವರು ಜಾಗವನ್ನು ಅತಿಕ್ರಮಿಸಿಕೊಂಡಿದ್ದರು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಕೇಶವಮೂರ್ತಿ ಅವರು ಕಂದಾಯ, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ದೊಡ್ಡಲತ್ತೂರಿಗೆ ತೆರಳಿ ಅತಿಕ್ರಮಣವಾಗಿದ್ದ ಜಾಗವನ್ನು ಸರ್ವೇ ಮಾಡಲು ಮುಂದಾದರು. ಈ ವೇಳೆ ಜಾಗವನ್ನು ಅತಿಕ್ರಮಿಸಿಕೊಂಡಿದ್ದ ವ್ಯಕ್ತಿಗಳು ಸಾಯುವುದಾಗಿ ಹೈಡ್ರಾಮಾ ನಡೆಸಿದರು. ಇದರಿಂದ ಕೆಲಕಾಲ ಸಂದಿಗ್ಧ ಪರಿಸ್ಥಿತಿ ಉಂಟಾಯಿತು. ಪೊಲೀಸರು ಅವರನ್ನು ಸಮಾಧಾನ ಪಡಿಸಿ ಸರ್ವೇ ಕಾರ್ಯಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಸರ್ವೇ ಕಾರ್ಯ ನಡೆಸಿದ ಅಧಿಕಾರಿಗಳು ಕೆಂಪಯ್ಯನಹಟ್ಟಿ ಗ್ರಾಮಸ್ಥರಿಗೆ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಹೆಸರಿಗೆ ಮೀಸಲಿರಿಸುವ ಮೂಲಕ ಸ್ಥಳದಲ್ಲಿ ನಾಮಫಲಕವನ್ನು ಅಳವಡಿಸಲಾಯಿತು. ರಾಜಸ್ವ ನಿರೀಕ್ಷಕ ಶಿವಕುಮಾರ್, ಸಬ್ ಇನ್ಸ್‌ಪೆಕ್ಟರ್ ಈಶ್ವರ್, ಮುಖಂಡರಾದ ರಾಮಲಿಂಗಂ, ಗುರುದೇವ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net