ದೊಡ್ಡಮ್ಮ ತಾಯಿ ದೇಗುಲದ ಆವರಣ ಸ್ವಚ್ಛತೆ

HUN-JAN-15-4(DHARMASTHALA PROGRAMME)
Published on

ಹುಣಸೂರು: ಪರಿಸರ ಸ್ವಚ್ಛತೆ ಮತ್ತು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮ ಜೀವನದ ಒಂದು ಭಾಗ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಘಟಕ 1ರ ಯೋಜನಾಧಿಕಾರಿ ಧನಂಜಯ್ ಅಭಿಪ್ರಾಯಪಟ್ಟರು.

ತಾಲೂಕಿನ ಬೋಳನಹಳ್ಳಿ ಶ್ರೀ ದೊಡ್ಡಮ್ಮ ತಾಯಿ ದೇವಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಜನೆಯ ವತಿಯಿಂದ ಶ್ರದ್ಧಾ ಕೇಂದ್ರದ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮದಡಿ ತಾಲೂಕಿನಲ್ಲಿ ಜ.8ರಿಂದ 14ರವರೆಗೆ ಒಟ್ಟು 52 ಶ್ರದ್ಧಾಕೇಂದ್ರಗಳನ್ನು ಸಂಘದ ಸದಸ್ಯರು ಸ್ವಚ್ಛಗೊಳಿಸಿದ್ದಾರೆ.

ತಾಲೂಕಿನಾದ್ಯಂತ ವಿವಿಧ ಗುಡಿಗಳು, ಮಂದಿರ, ದೇವಾಲಯಗಳನ್ನು ಸ್ವಚ್ಛಗೊಳಿಸುವ ಮೂಲಕ ಗ್ರಾಮೀಣರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲಾಗಿದೆ. ಗಾಂಧೀಜಿಯವರು ಕಂಡ ಸ್ವಚ್ಛ ಭಾರತದ ಕನಸು ನನಸಾಗುವಂತೆ ಮಾಡುವಲ್ಲಿ ನಾವೆಲ್ಲರೂ ಒಂದಾಗಿ ದುಡಿಯಬೇಕಿದೆ. ನೈರ್ಮಲ್ಯ ಕೇವಲ ಭೌತಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಆಗಬೇಕು. ಶ್ರದ್ಧಾ ಕೇಂದ್ರಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಮೂಲ ಉದ್ದೇಶ ಭಕ್ತರ ಮನಸು ಉಲ್ಲಾಸಭರಿತವಾಗಿ ದೇವರ ಸ್ಮರಣೆ ಸಾಂಗೋಪವಾಗಿ ನಡೆಯಬೇಕು ಎನ್ನುವುದಾಗಿದೆ ಎಂದರು.

ಯೋಜನೆಯ ನೂರಾರು ಕಾರ್ಯಕರ್ತರು, ಒಕ್ಕೂಟದ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಸ್ವ ಸಹಾಯ ಸಂಘಗಳ ಸದಸ್ಯರು ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮೇಲ್ವಿಚಾರಕ ಕಿರಣ್, ಸೇವಾ ಪ್ರತಿನಿಧಿ ಮಹೇಶ್ವರಿ, ಒಕ್ಕೂಟದ ಸದಸ್ಯರಾದ ಲಲಿತಮ್ಮ, ಶಿಲ್ಪಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net