

ದೊಡ್ಡಬಳ್ಳಾಪುರ: ಕರೊನಾ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳವಾರದಿಂದ (ಏ.20) ಮೇ 3ರವರೆಗೆ ತಾಲೂಕಿನಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಕೇಂದ್ರ ವಲಯ ಐಜಿಪಿ ಎಂ. ಚಂದ್ರಶೇಖರ್ ಹೇಳಿದರು.
ನಗರ ಪೊಲೀಸ್ ಠಾಣೆ ಆವರಣದಲ್ಲಿ ಕರೊನಾ ನಿಯಂತ್ರಣ ಜಾಗೃತಿ ಅಭಿಯಾನ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಕರೊನಾ 2ನೇ ಅಲೆಯು ಅತಿ ವೇಗವಾಗಿ ಹರಡುತ್ತಿದೆ. ಸಾರ್ವಜನಿಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕುಟುಂಬ ಮತ್ತು ಅಕ್ಕಪಕ್ಕದ ಹಿತೈಷಿಗಳ ಆರೋಗ್ಯ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಭಾರಿ ದಂಡಕ್ಕೆ ಹೆದರಿ ಮಾಸ್ಕ್ ಧರಿಸುವುದಲ್ಲ. ಬದಲು ಜನರೇ ಸ್ವಪ್ರೇರಣೆಯಿಂದ ಮಾಸ್ಕ್ ಧರಿಸಬೇಕು ಎಂದರು.
ಶುಭ-ಸಮಾರಂಭಗಳು ಮತ್ತಿತರ ಕಾರ್ಯಕ್ರಮಗಳಲ್ಲಿ ನಿಗದಿತ ಪ್ರಮಾಣದಲ್ಲೇ ಸಾರ್ವಜನಿಕರು ಭಾಗವಹಿಸಬೇಕು ಎಂದು ಸರ್ಕಾರದಿಂದ ಸುತ್ತೋಲೆ ಬಂದಿದೆ. ಈ ನಿಮಯ ಪಾಲನೆ ಕಡ್ಡಾಯ. ಕರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಈಗಾಗಲೇ ಮಾಸ್ಕ್ ಧರಿಸಿದವರಿಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ 54 ಪ್ರಕರಣಗಳನ್ನು ದಾಖಲಿಸಲಾಗಿದೆ, ಇದೆಲ್ಲವೂ ಸೋಂಕು ತಡೆಗಟ್ಟುವ ಕ್ರಮಗಳಾಗಿವೆ ಎಂದರು.
ಎಸ್ಪಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಕರೊನಾ ನಿಗ್ರಹಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ, ಅದೇ ಹಣಕ್ಕೆ ಆರ್.ಕೆ. ಟ್ರಸ್ಟ್‌ನಿಂದ ಮಾಸ್ಕ್ ವಿತರಿಸಲಾಗುವುದು ಎಂದು ತಿಳಿಸಿದರು.