ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ

Central minister Kishan Reddy
Central minister KishanReddy in Doddaballapura
Published on


ದೊಡ್ಡಬಳ್ಳಾಪುರ
ದೇಶದಲ್ಲಿ ನಡೆಯುತ್ತಿರುವ ಪ್ರತಿ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಕಾಣುತ್ತಿದೆ. ಮುಂದೆ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿಯೂ ಕಮಲ ಅರಳಲಿದೆ. ಮತ್ತೊಮ್ಮೆ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಕಿಶನ್‌ರೆಡ್ಡಿ ಹೇಳಿದರು.
ನಗರದ ಡಿಪಿವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ನೇಕಾರ ಸಮುದಾಯ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ನೇಕಾರ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಮಾಡಿರುವುದು ಬಿಜೆಪಿ ಸರ್ಕಾರ ಮಾತ್ರ. ಬಿಜೆಪಿಯ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ದೊಡ್ಡಬಳ್ಳಾಪುರಕ್ಕೆ ಅಳೆದು ತೂಗಿ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಪಕ್ಷದ ನಿಷ್ಠಾವಂತ, ಅಭಿವೃದ್ಧಿಯ ಮುಂದಾಲೋಚನೆಯಿರುವ ಅಭ್ಯರ್ಥಿ ಧೀರಜ್ ಮುನಿರಾಜು ಅವರನ್ನು ಅಖೈರು ಮಾಡಲಾಗಿದೆ. ಇಂತಹ ಅವಕಾಶವನ್ನು ಒದಗಿಸುವುದು ಬಿಜೆಪಿ ಮಾತ್ರ. ಕಾಂಗ್ರೆಸ್ ಕೇವಲ ಕುಟುಂಬ ರಾಜಕೀಯಕ್ಕೆ ಸಿಮೀತವಾಗಿದೆ. ದೊಡ್ಡಬಳ್ಳಾಪುರದಲ್ಲಿ ನೇಕಾರ ಸಮುದಾಯ ಹೆಚ್ಚಿನದಾಗಿದೆ. ನೇಕಾರರೇ ನಿರ್ಣಾಯಕರಾಗಿದ್ದು, ಈ ಬಾರಿ ನೇಕಾರ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ನೀಲನಕ್ಷೆ ಹೊಂದಿರುವ ಧೀರಜ್ ಮುನಿರಾಜುಗೆ ಅವಕಾಶ ಮಾಡಿಕೊಡಬೇಕು ಎಂದರು.
ದೊಡ್ಡಬಳ್ಳಾಪುರದ ಸೀರೆಗಳಿಗೆ ಬ್ರ್ಯಾಂಡ್, ವಾಣಿಜ್ಯ ಸಂಕೀರ್ಣ: ಕರೊನಾ ಸಮಯದಲ್ಲಿ ನೇಕಾರ ಸಮುದಾಯ ಸಂಕಷ್ಟದಲ್ಲಿದ್ದಾಗ ಯಡಿಯೂರಪ್ಪ ಸರ್ಕಾರ ಪರಿಹಾರ ಧನ ಘೋಷಣೆ ಮಾಡಿ ನೇಕಾರರ ನೇರವಿಗೆ ಧಾವಿಸಿತ್ತು. ದೊಡ್ಡಬಳ್ಳಾಪುರದಲ್ಲಿ ಉತ್ಪಾದನೆಯಾಗುವ ರೇಷ್ಮೆ ಸೀರೆಗಳಿಗೆ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಇದೆ. ಇಂತಹ ನೇಕಾರರ ಉತ್ಪಾದನೆಗಳಿಗೆ ಬ್ರ್ಯಾಂಡ್ ಇಲ್ಲದೆ ಸ್ಥಳೀಯ ನೇಕಾರರು ಸಂಕಷ್ಟದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಧೀರಜ್ ಮುನಿರಾಜುಗೆ ಆಶೀರ್ವಾದ ಮಾಡಿದರೆ ದೊಡ್ಡಬಳ್ಳಾಪುರದಲ್ಲಿ ಉತ್ಪಾದನೆಯಾಗುವ ನೇಯ್ಗೆ ಉತ್ಪನ್ನಗಳಿಗೆ ಬ್ರ್ಯಾಂಡ್ ವ್ಯವಸ್ಥೆ ಮಾಡಿ, ದೊಡ್ಡಬಳ್ಳಾಪುರದಲ್ಲಿಯೇ ಆತ್ಯಾಧುನಿಕ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ನಗರಸಭೆ ಮಾಜಿ ಅಧ್ಯಕ್ಷ ಕೆ.ಬಿ ಮುದ್ದಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net