

ಮೈಸೂರು: ಐತಿಹಾಸಿಕ ಹಿನ್ನೆಲೆಯ ದೊಡ್ಡಗಡಿಯಾರ ದುರಸ್ತಿಗೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ 44 ಲಕ್ಷ ರೂ. ನೀಡಿರುವುದಾಗಿ ಮೇಯರ್ ಶಿವಕುಮಾರ್ ತಿಳಿಸಿದರು.
ಈ ಕಾಮಗಾರಿಯ ನಿರ್ವಹಣೆಯನ್ನು ಇಲಾಖೆಗೆ ನೀಡಲಾಗಿದೆ. ಮೊದಲು ನೀಡಿದ್ದಕ್ಕಿಂತ ಹೆಚ್ಚಿನ ಅನುದಾನ ನೀಡುವಂತೆ ಅಧಿಕಾರಿಗಳು ಕೋರಿದ್ದರು, ಅದಕ್ಕೆ ಸ್ಪಂದಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.
ಪುರಭವನದ ಒಂದು ಭಾಗ ಯಾವುದೇ ಸಂದರ್ಭದಲ್ಲಿ ಬೀಳುವ ಹಂತದಲ್ಲಿದೆ.
ಪುರಭವನಕ್ಕೆ ಸಂಬಂಧಿಸಿದ ವ್ಯಾಜ್ಯವೊಂದು ನ್ಯಾಯಾಲಯದಲ್ಲಿ ಇರುವುದರಿಂದ ಕಾಮಗಾರಿ ಆರಂಭಕ್ಕೆ ಹಿನ್ನಡೆಯಾಗಿದೆ. ಪಾಲಿಕೆ ಪರ ವಕೀಲರ ಮೂಲಕ ನ್ಯಾಯಾಲಯಕ್ಕೆ ಅಗತ್ಯ ಮಾಹಿತಿ ಸಲ್ಲಿಸಿ ಶೀಘ್ರ ದುರಸ್ತಿ ಕಾರ್ಯಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.