

ಹಳಿಯಾಳ: ದಟ್ಟ ಕಾಡಿನ ನಡುವೆಯಿರುವ ಪುಟ್ಟ ಗ್ರಾಮ ದೊಡ್ಡಕೊಪ್ಪದ ಗ್ರಾಮದೇವಿ ಶ್ರೀ ದ್ಯಾಮವ್ವಾ ಮತ್ತು ಶ್ರೀ ದುರ್ಗಾದೇವಿಯರ ಜಾತ್ರಾ ಮಹೋತ್ಸವ ಗುರುವಾರ ಆರಂಭಗೊಂಡಿದೆ. ಎರಡು ದಿನಗಳ ಗ್ರಾಮದೇವಿಯರ ಹೊನ್ನಾಟಕ್ಕೆ ಇಡೀ ಗ್ರಾಮವೇ ಸಂಭ್ರಮದಲ್ಲಿ ಮಿಂದೆದ್ದಿತು.
ಗ್ರಾಮದಲ್ಲಿನ ಮರಾಠಾ ಸಮುದಾಯದವರ ಜೊತೆಗೆ ಅಲ್ಲಿ ನೆಲೆಸಿರುವ ಕ್ರಿಶ್ಚಿಯನ್ನರು ಸಹ ಜಾತ್ರಾ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅತ್ತ ತಾಲೂಕಿನ ಅಮ್ಮನಕೊಪ್ಪ ಗ್ರಾಮದಲ್ಲಿಯೂ ಆರಂಭಗೊಂಡಿರುವ ಗ್ರಾಮದೇವಿಯ ಜಾತ್ರಾ ಮಹೋತ್ಸವದ ಎರಡನೇ ದಿನದ ಹೊನ್ನಾಟವು ಗುರುವಾರ ವಿಜೃಂಭಣೆಯಿಂದ ನಡೆಯಿತು.
ಗ್ರಾಮದೇವಿಯರ ಹೊನ್ನಾಟ: ಗುರುವಾರ ಗ್ರಾಮದೇವಿಯ ದೇವಸ್ಥಾನದಲ್ಲಿ ನಡೆದ ಧಾರ್ವಿುಕ ಪೂಜಾ ವಿಧಿಯಲ್ಲಿ ಗ್ರಾಮದ ಮಿರಾಶಿ ಹೊನ್ನಾಟದ ಆಚರಣೆಗೆ ಚಾಲನೆ ನೀಡಿದರು. ಹದಿನೈದು ವರ್ಷಗಳ ನಂತರ ನಡೆಯುತ್ತಿರುವ ಈ ಹೊನ್ನಾಟದ ಪಲ್ಲಕಿಯನ್ನು ಗ್ರಾಮಸ್ಥರು ಸ್ವಾಗತಿಸಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡರು.
ಗ್ರಾಮದ ಮುಖ್ಯ ಬೀದಿಯಲ್ಲಿ ಸಂಚಾರ ಆರಂಭಿಸಿದ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಾದೇವಿಯರ ಹೊನ್ನಾಟದ ಪಲ್ಲಕ್ಕಿಯು ಅಲ್ಲಿನ ಪ್ರಾಚೀನ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಅಡ್ಡಗಟ್ಟಿ ಕಟ್ಟಿರುವ ಎರಡು ಮನೆಗಳ ಮಧ್ಯೆಯಿರುವ ಕಾಲು ಮಾರ್ಗದಲ್ಲಿ ಒಳ ಹೋಗಲು ಮೂರ್ನಾಲ್ಕು ನಾಲ್ಕು ಬಾರಿ ಪ್ರಯತ್ನಿಸಿ, ಅಲ್ಲಿಯೇ ನಿಂತಿತು, ದೇವಸ್ಥಾನದ ಪಂಚರೆಲ್ಲರೂ ಸೇರಿ ದೇವಿಯ ಇಚ್ಛೆಯನ್ನು ಕೇಳಿ ಶಾಂತಳಾಗುವಂತೆ ಪರಿ ಪರಿಯಾಗಿ ಮನವಿ ಮಾಡಿದಾಗ. ದೇವಸ್ಥಾನದ ರಸ್ತೆ ಅತಿಕ್ರಮಣ ತೆರವುಗೊಳಿಸುವಂತೆ ದೇವಿ ಆಜ್ಞಾಪಿಸಿದಳು.
ಆತಿಥ್ಯ ಸಹಭೋಜನ: ಹೊನ್ನಾಟದೊಂದಿಗೆ ಆತಿಥ್ಯ ಭೋಜನವು ಗ್ರಾಮದೇವಿ ಜಾತ್ರೆಯ ಮಹತ್ವದ ಘಟ್ಟವಾಗಿದೆ. ಗ್ರಾಮದೇವಿಯ ಜಾತ್ರೆಯಲ್ಲಿ ಮನೆಗೆ ಹಾಗೂ ಗ್ರಾಮಕ್ಕೆ ಭೇಟಿ ನೀಡುವ ಅತಿಥಿಗಳಿಗೆ ಗೌರವಾರ್ಥ ನೀಡುವ ಜಾತ್ರೆಯ ಅದ್ದೂರಿ ಆತಿಥ್ಯ ಭೋಜನ ಹಾಗೂ ಉಡುಗೊರೆ ನೀಡುವ ಧಾರ್ವಿುಕ ವಿಧಿಯು ಅಮ್ಮನಕೊಪ್ಪ ಮತ್ತು ದೊಡ್ಡಕೊಪ್ಪ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆಯಲಿವೆ. ಈ ಭೋಜನ ಕೂಟಕ್ಕೆ ಪ್ರತಿ ಮನೆಯಲ್ಲೂ ಸಿದ್ಧತೆಗಳು ನಡೆದಿವೆ.