ದೊಡ್ಡಕೆರೆ ಕಲ್ಯಾಣಿಯಲ್ಲಿ ಮಾದಪ್ಪನ ತೆಪ್ಪೋತ್ಸವ

Published on

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೊಡ್ಡಕೆರೆ ಕಲ್ಯಾಣಿಯಲ್ಲಿ ಬುಧವಾರ ರಾತ್ರಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮಾದಪ್ಪನ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಮೂಲಕ 5 ದಿನಗಳ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತ್ತು.

ಮ.ಬೆಟ್ಟದಲ್ಲಿ ಬೆಳಗ್ಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಹಾರಥೋತ್ಸವವು ಜರುಗಿತು. ರಾತ್ರಿ ದೇಗುಲದಲ್ಲಿ ಸಾಲೂರು ಶ್ರೀಗಳ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಮಾದಪ್ಪನಿಗೆ ಮಹಾನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವರ ಉತ್ಸವ ಮೂರ್ತಿಯನ್ನು ಸತ್ತಿಗೆ, ಸೂರಿಪಾನಿ, ವಾದ್ಯಮೇಳದೊಂದಿಗೆ ದೊಡ್ಡಕೆರೆ ಕಲ್ಯಾಣಿಗೆ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿದ್ದ ತೆಪ್ಪದಲ್ಲಿ ಸ್ವಾಮಿಯ ಮೂರ್ತಿಯನ್ನು ಕೂರಿಸಿ ಶ್ರೀ ಶಾಂತಮಲ್ಲಿಕರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಪೂಜೆ ಸಲ್ಲಿಸಿದರು. ಬಳಿಕ ನೆರೆದಿದ್ದ ಅಪಾರ ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಈ ವೇಳೆ ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂದು ಘೋಷಣೆ ಕೂಗಿ ಭಕ್ತಿಭಾವ ಮೆರೆದರು. ಬಿಲ್ಲು, ಬಾಣಗಾರಿಕೆ ಹಾರಿಸಿದರಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಭಕ್ತರು ಅದರಲ್ಲೂ ಮಹಿಳೆಯರು ವಾದ್ಯದ ತಾಳಕ್ಕೆ ತಕ್ಕಂತೆ ಕುಳಿದು ಕುಪ್ಪಳಿಸಿ ಸಂತಸಪಟ್ಟರು. ತೆಪ್ಪೋತ್ಸವದ ಬಳಿಕ ದೇವರ ಮೂರ್ತಿಯನ್ನು ದೇಗುಲಕ್ಕೆ ಒಯ್ದು ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಮೂಲಕ 5 ದಿನಗಳ ಕಾಲ ಲಕ್ಷಾಂತರ ಭಕ್ತರ ನಡುವೆ ನಡೆದ ದೀಪಾವಳಿ ಜಾತ್ರೆಗೆ ತೆರೆ ಬಿದ್ದಿತು.

ಕಳೆದ 5 ದಿನಗಳ ಕಾಲ ನಡೆದ ದೀಪಾವಳಿ ಜಾತ್ರೆಗೆ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಿದ್ದರು. ಇದರಲ್ಲಿ ಬಹುತೇಕ ಭಕ್ತರು ಇಲ್ಲಿಯೇ ವಾಸ್ತವ್ಯ ಹೂಡಿದ್ದರು. ಇದರಿಂದ ಮ.ಬೆಟ್ಟ ಭಕ್ತರಿಂದ ತುಂಬಿ ತುಳುಕುತ್ತಿತ್ತು. ವಿದ್ಯುತ್ ದೀಪಾಲಂಕಾರ ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಬುಧವಾರ ಮಹಾ ರಥೋತ್ಸವ ಮುಗಿದ ಬಳಿಕ ಬಹುತೇಕ ಭಕ್ತರು ತಮ್ಮ ಊರುಗಳಿಗೆ ತೆರಳಿದರೆ, ಇನ್ನು ಕೆಲವರು ತೆಪ್ಪೋತ್ಸವದ ಬಳಿಕ ಹಾಗೂ ಗುರುವಾರ ತಮ್ಮ ಊರಿನತ್ತ ಮುಖ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net