ದೊಡ್ಡಕೆರೆ ಏರಿ ದುರಸ್ತಿಗೆ ಒತ್ತಾಯ

20-GPT-1
Published on

  • ಚಾಮರಾಜನಗರ : ಕಳೆದ ಎರಡು ವರ್ಷಗಳಿಂದ ಕೋಡಿಬೀಳುತ್ತಿರುವ ಗುಂಡ್ಲುಪೇಟೆಯ ಹಂಗಳ ದೊಡ್ಡ ಕೆರೆಯ ಏರಿ ಅಪಾಯದಲ್ಲಿದ್ದು ಅನಾಹುತ ಸಂಭವಿಸುವ ಮೊದಲೇ ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ಹಂಗಳ ಹೋಬಳಿಯ ಅಂತರ್ಜಲ ಮೂಲವಾದ ಹಿರೀಕೆರೆ ಬಂಡೀಪುರ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ತಪ್ಪಲಿನಲ್ಲಿದೆ. ಇದು ಗುಂಡ್ಲುನದಿಯ ಮೂಲವಾಗಿದೆ. ಬೆಟ್ಟಕ್ಕೆ ಉತ್ತಮ ಮಳೆಬಿದ್ದರೆ ಕೆರೆಗೆ ನೀರು ಹರಿದುಬರುತ್ತದೆ. ಹಿಂದಿನ ನಾಲ್ಕೈದು ವರ್ಷಗಳು ಬತ್ತಿಗೋಗಿದ್ದ ಕೆರೆಗೆ ಕಳೆದ ವರ್ಷ ನೀರು ತುಂಬಿತ್ತು. ಈ ಸಂದರ್ಭದಲ್ಲಿ ಏರಿಯ ಮೇಲೆ ಸಣ್ಣ ಸಣ್ಣ ಬಿರುಕುಗಳಿರುವ ಬಗ್ಗೆ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
  • ಮರಳಿನ ಚೀಲಗಳನ್ನು ಅಳವಡಿಸಿ ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ದುರಸ್ತಿ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ವರ್ಷ ಕಳೆದರೂ ಯಾವುದೇ ಕ್ರಮಕೈಗೊಳ್ಳದ ಪರಿಣಾಮ ಈ ಬಾರಿ ಏರಿಯ ಮೇಲೆ ಸಂಚರಿಸುವ ವಾಹನಗಳ ಭಾರಕ್ಕೆ ಅಲ್ಲಲ್ಲಿ ದೊಡ್ಡ ದೊಡ್ಡ ಕೊರಕಲುಗಳು ಉಂಟಾಗುತ್ತಿವೆ. ಈ ಬಾರಿ ಮತ್ತೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.

  • ಸುತ್ತಲೂ ನೂರಾರು ಎಕರೆ ಜಮೀನುಗಳಿದ್ದು, ಈ ಏರಿಯ ಮಾರ್ಗದಲ್ಲಿಯೇ ಗ್ರಾಮದ ರೈತರು ಸಂಚರಿಸಬೇಕಿದೆ. ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಏರಿಯಲ್ಲಿ ದೊಡ್ಡ ದೊಡ್ಡ ಹಳ್ಳಗಳುಂಟಾಗುತ್ತಿದ್ದು, ಏರಿಯ ಭದ್ರತೆಗೆ ಸವಾಲಾಗುತ್ತಿವೆ.

  • ಏರಿಯಲ್ಲಿ ಬಿರುಕುಂಟಾದರೆ ಅಪಾರ ಪ್ರಮಾಣದ ನೀರು ಪೋಲಾಗುವುದರೊಂದಿಗೆ ನೂರಾರು ಹೆಕ್ಟೇರ್ ಜಮೀನುಗಳ ಬೆಳೆ ಹಾಗೂ ಮಣ್ಣು ನಾಶವಾಗುತ್ತದೆ. ನಂತರ ರಿಪೇರಿ ಮಾಡಿಸಿದರೂ ಮತ್ತೆ ಕೆರೆ ತುಂಬಲು ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಏರಿಯ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ರೈತ ಮುಖಂಡ ಹಂಗಳ ಮಾಧು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net