ದೊಡ್ಡ ಕುಟುಂಬದ ವಿರುದ್ಧ ಜಯ ಸಿಕ್ಕಿದೆ: ವಕೀಲ ದೇವರಾಜೇಗೌಡ

ದೊಡ್ಡ ಕುಟುಂಬದ ವಿರುದ್ಧ ಜಯ ಸಿಕ್ಕಿದೆ: ವಕೀಲ ದೇವರಾಜೇಗೌಡ
Published on

    ಹಾಸನ: ನಾನು ಹೋರಾಟ ಮಾಡಿರುವುದು ವೈಯಕ್ತಿಕ ಲಾಭಕ್ಕಲ್ಲ. ನನ್ನ ಜಿಲ್ಲೆಯ ಸ್ವಾತಂತ್ರ್ಯಕ್ಕಾಗಿ ಮಾಡಿದ್ದು. ದೊಡ್ಡ ಕುಟುಂಬದ ವಿರುದ್ಧ ಜಯ ಸಿಕ್ಕಿದೆ ಎಂದು ಹೊಳೆನರಸೀಪುರ ವಿಧಾನಸಭಾ ಪರಾಜಿತ ಬಿಜೆಪಿ ಅಭ್ಯರ್ಥಿ ಹಾಗೂ ವಕೀಲ ಜಿ. ದೇವರಾಜೇಗೌಡ ಹೇಳಿದರು.

ಜಿಲ್ಲೆಯ ಪ್ರಬುದ್ಧ ರಾಜಕಾರಣಿಗಳ ಒಂದು ಕುಟುಂಬ ಹಲವಾರು ದಶಕಗಳಿಂದ ಜಿಲ್ಲೆಯನ್ನು ತಮ್ಮ ಕಪಿಮುಷ್ಠಿಗೆ ತೆಗೆದುಕೊಂಡು ಅಧಿಕಾರಿಗಳ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿದ್ದರು. ಇವರ ವಿರುದ್ಧ ಧ್ವನಿ ಎತ್ತುವವರು ಯಾರೂ ಇರಲಿಲ್ಲ. ನ್ಯಾಯದೇವತೆಯ ಕಣ್ಣು ತೆರೆಸಬೇಕೆಂದು ನಾನು ನನ್ನ ಜೀವವನ್ನೇ ಪಣಕ್ಕೆ ಇಟ್ಟು ನಿರಂತರವಾಗಿ ನಾಲ್ಕೂವರೆ ವರ್ಷಗಳ ಕಾಲ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಈ ತೀರ್ಪು ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೇವೇಗೌಡರ ಕುಟುಂಬದ ಹೆಸರೇಳದೆ ಪರೋಕ್ಷವಾಗಿ ಹೇಳಿದರು.

ನಾನು ಲೋಕಸಭಾ ಚುನಾವಣೆಯ ತಕರಾರು ಅರ್ಜಿ ಸಲ್ಲಿಸಿದ ನಂತರ ನನ್ನ ಜತೆಯಲ್ಲಿ ಎ. ಮಂಜು ಅವರು ಕೂಡ ತಕರಾರು ಅರ್ಜಿ ಸಲ್ಲಿಸಿದರು. ಕಾನೂನು ಹೋರಾಟದಲ್ಲಿ ಸತ್ಯ ಹೊರಬಂದರೆ ಪರಾಜಿತ ಅಭ್ಯರ್ಥಿ ಆಗಿರುವ ಎ. ಮಂಜು ಅವರನ್ನು ಸಂಸದ ಸ್ಥಾನಕ್ಕೆ ಪರಿಗಣಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ಕೆಲ ಆಸೆ-ಆಮಿಷಗಳಿಗೆ ಒಳಗಾಗಿ ಚುನಾವಣೆ ತಕರಾರು ಅರ್ಜಿ ವಿಚಾರಣೆ ವೇಳೆ ಬಿಟ್ಟು ಹೋದರು. ಇಬ್ಬರ ಕೇಸ್‌ಗಳನ್ನು ವಿಲೀನಗೊಳಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ ಎಂದರು.

ತೀರ್ಪ ಕೊಟ್ಟ ತಕ್ಷಣ ಪ್ರಜ್ವಲ್ ರೇವಣ್ಣ ಅರ್ಜಿ ಹಾಕಬೇಕಾಗಿತ್ತು. ಯಾವ ಕಾರಣಕ್ಕೆ ಹಾಕಲಿಲ್ಲ ಎಂಬುದು ಗೊತ್ತಿಲ್ಲ. ಕಳೆದ ಎರಡು ದಿನಗಳ ಹಿಂದೆ ಅರ್ಜಿ ಹಾಕಿದ್ದು, ತಾತ್ಕಾಲಿಕ 30 ದಿನಗಳವರೆಗೆ ಮಾತ್ರ. ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ತೀರ್ಪು ನೀಡಿದ್ದರೂ ಅವರು ಈಗಲೂ ಸಂಸದರೆ. ಏಕೆಂದರೆ ಸಂಸದರನ್ನು ವಜಾ ಮಾಡುವ ಅಧಿಕಾರ ಇರುವುದು ಲೋಕಸಭಾ ಸ್ಪೀಕರ್‌ಗೆ ಮಾತ್ರ. ಅವರನ್ನು ಸ್ಪೀಕರ್ ಇನ್ನು ವಜಾ ಮಾಡಿಲ್ಲ. 30 ದಿನದ ನಂತರ ಸ್ಪೀಕರ್ ಏನು ಬೇಕಾದರೂ ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹೇಮಾನಂದ್, ಲತೇಶ್ ಇತರರು ಉಪಸ್ಥಿತರಿದ್ದರು.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ:

ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ನನಗೆ ಯೋಗ್ಯತೆ ಇದೆ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದೇನೆ. ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಎಂಪಿ ಚುನಾವಣೆಗೆ ಸ್ಪರ್ಧೆ ಮಾಡಲು ಪಕ್ಷ ತೀರ್ಮಾನ ಮಾಡಿದರೂ ಸ್ವಾಗತ, ಕೊಡದಿದ್ದರೂ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲಾಗುವುದು ಎಂದು ದೇವರಾಜೇಗೌಡ ಅವರು ತಮ್ಮ ಅಭಿಪ್ರಾಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net