ದೊಡ್ಡ ಉದ್ಯಮವಾದ ಶಿಕ್ಷಣ ವ್ಯವಸ್ಥೆ

26
Published on

ಮೈಸೂರು: ಈ ಹಿಂದಿನ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳು ಜ್ಞಾನ ಪ್ರಸಾರದ ಕಾಯಕ ಮಾಡುತ್ತಿದ್ದವು. ಆದರೀಗ ಶಿಕ್ಷಣ ವ್ಯವಸ್ಥೆ ತನ್ನ ಮೂಲ ಉದ್ದೇಶ ಮರೆತು ದೊಡ್ಡ ಉದ್ಯಮವಾಗಿ ರೂಪಾಂತರಗೊಂಡಿವೆ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಕಳವಳ ವ್ಯಕ್ತಪಡಿಸಿದರು.


ಆರ್.ಎಸ್ ನಾಯ್ಡು ಕಲೆ ಮತ್ತು ಸಾಂಸ್ಕೃತಿಕ ಕಲ್ಯಾಣ ಟ್ರಸ್ಟ್ ವತಿಯಿಂದ ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಆರ್‌ಎಸ್‌ಎನ್ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಈ ಹಿಂದೆ ಒಂದು ಶಿಕ್ಷಣ ಸಂಸ್ಥೆಯಾಗಲಿ ಅಥವಾ ಸಂಘ ಸಂಸ್ಥೆಯಾಗಲಿ ಸ್ಥಾಪನೆಯಾಗಲು ಸಾಕಷ್ಟು ಶ್ರಮ, ಸಮಯ ಬೇಕಿತ್ತು. ಆದರೀಗ ಸೇವೆಯ ಹೆಸರಿನಲ್ಲಿ ಕೆಲವೇ ಗಂಟೆಗಳಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ ಎಂದರು.


ಜಾಗತೀಕರಣದಿಂದ ಆರ್ಥಿಕ ಮತ್ತು ರಾಜಕೀಯ ಸ್ಥಿತ್ಯಂತರಗಳು ಉಂಟಾಗುತ್ತಿವೆ. ಜಗತ್ತಿನಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಇದೀಗ ಎಲ್ಲವೂ ಉದ್ಯಮಗಳಂತೆಯೇ ಕಾಣುತ್ತಿವೆ. ಆದ್ದರಿಂದ, ಇಂತಹ ವಿಚಾರಗಳ ಬಗ್ಗೆ ಯುವ ಪೀಳಿಗೆ ಆಲೋಚಿಸಬೇಕಿದೆ. ವಿದ್ಯಾರ್ಥಿಗಳ ಮುಂದೆ ಇಂತಹ ಸಾಕಷ್ಟು ಸವಾಲುಗಳಿವೆ ಎಂದು ಹೇಳಿದರು.


ಕಂಪ್ಯೂಟರ್ ಮತ್ತು ಮೊಬೈಲ್‌ನಿಂದ ಸಿಗುವ ಮಾಹಿತಿಯೇ ಅಂತಿಮ ಮತ್ತು ಶ್ರೇಷ್ಠವೆಂದು ವಿದ್ಯಾರ್ಥಿಗಳು ನಂಬಿಕೊಂಡಿದ್ದಾರೆ. ಅದನ್ನೇ ಪರೀಕ್ಷೆಗಳಲ್ಲೂ ಬರೆಯುತ್ತಿದ್ದಾರೆ. ಇದು ಸರಿಯಲ್ಲ. ಪುಸ್ತಕಗಳನ್ನು ಓದಿ, ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.


ದೇಶಕ್ಕಾಗಿ ಹೋರಾಡಿದ ನಾಯಕರು, ಸಾಹಿತಿಗಳು, ಕಲಾವಿದರನ್ನು ಸ್ಮರಣೆ ಮಾಡುತ್ತಿಲ್ಲ. ಸಮಾನತೆ, ಸಮಾಜವಾದ ಎಂಬ ಆಶಯಗಳು ಮರೆಯಾಗಿವೆ. ವೈಯಕ್ತಿಕ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಈ ಹಿಂದೆ ಒಬ್ಬ ರಾಜಕಾರಣಿ ಸಾಕಷ್ಟು ಪರಿಶ್ರಮ ಹಾಕಿ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಸಮಾಜದ ಹಿತಕ್ಕಾಗಿ ವೈಯಕ್ತಿಕ ಜೀವನವನ್ನೇ ಮುಡಿಪಾಗಿಟ್ಟು ನಾಯಕರಾಗುತ್ತಿದ್ದರು. ಆದರೀಗ ಹಣವುಳ್ಳವರು ರಾತ್ರೋರಾತ್ರಿ ಬಂದು ಚುನಾವಣಾ ಟಿಕೆಟ್ ಖರೀದಿ ಮಾಡಿ ನಾಯಕರಾಗುತ್ತಿದ್ದಾರೆ. ಅದೇ ರೀತಿ ಉದ್ದಿಮೆಯ ಮನೆತನದವರೂ ದಿಢೀರ್ ಸಾಹಿತಿ ಆಗುತ್ತಿದ್ದಾರೆ. ಮುಂದೆ ಅವರಿಗೆ ಜ್ಞಾನಪೀಠ, ಭಾರತರತ್ನದಂತಹ ಪ್ರತಿಷ್ಠಿತ ಪ್ರಶಸ್ತಿ ದೊರೆತರೂ ಆಶ್ಚರ್ಯ ಇಲ್ಲ ಎಂದರು.


ದಿ ಇನ್ಸ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಪುಟ್ಟಸ್ವಾಮಿ ಅವರಿಗೆ ಆರ್‌ಎಸ್‌ಎನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಶಿವರಾಜಪ್ಪ, ಪ್ರಾಂಶುಪಾಲ ಡಾ.ಎಂ.ಮಹದೇವಸ್ವಾಮಿ, ಟ್ರಸ್ಟ್‌ನ ಕಾರ್ಯದರ್ಶಿ ಕುಬೇರಗೌಡ, ಟ್ರಸ್ಟಿ ಎಸ್.ಪ್ರಭಾ, ಸಹಾಯಕ ಪ್ರಾಧ್ಯಾಪಕ ಡಾ.ಟಿ.ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net