

ಸಿಂಧನೂರು: ನಗರದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಹಾಗೂ ಕೂಡಲೇ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರಗೆ ಶ್ರಮಜೀವಿ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ರಾಯಚೂರು, ಗಂಗಾವತಿ, ಕುಷ್ಟಗಿ ಮಾರ್ಗ, ಸುಕಾಲಪೇಟೆ ರಸ್ತೆಯಲ್ಲಿ ದೊಡ್ಡ ಅಂಗಡಿಯವರು ರಸ್ತೆ ಕಬಳಿಸಿದ್ದಾರೆ. ದೊಡ್ಡ ಅಂಗಡಿಯವರನ್ನು ಬಿಟ್ಟು ಬೀದಿಬದಿ ವ್ಯಾಪಾರಿಗಳ ವಿರುದ್ಧ ಬುಲ್ಡೋಜರ್ ಚಲಾಯಿಸಿದ್ದು ಸರಿಯಲ್ಲ. ಪಾದಚಾರಿ ಮಾರ್ಗದ ಹಿಂದೆ ಸ್ಥಳವಿರುವ ಕಡೆ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರಕ್ಕೆ ಅವಕಾಶ ನೀಡುವುದು ನಗರಸಭೆ ಕರ್ತವ್ಯವಾಗಿದೆ ಎಂದು ತಿಳಿಸಲಾಯಿತು.
ರಸ್ತೆ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳನ್ನೂ ತೆರವುಗೊಳಿಸಬೇಕು. ಸರ್ಕಾರಿ ಸ್ಥಳದಲ್ಲಿ ತಳ್ಳುವ ಬಂಡಿ ಇಟ್ಟುಕೊಂಡು ಹಣ್ಣು, ತರಕಾರಿ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ನಗರಸಭೆ ಹಾಗೂ ಟೆಂಡರ್‌ದಾರರ ನಿತ್ಯದ ಹಾಗೂ ವಾರದ ತೆರಿಗೆ ವಸೂಲಾತಿ ನಿಲ್ಲಿಸಬೇಕೆಂದು ಒತ್ತಾಯಿಸಲಾಯಿತು.