

ಚಾಮರಾಜನಗರ: ಹೊಂಗನೂರು ಗ್ರಾಮದಲ್ಲಿ ನಿರ್ಮಾಣವಾಗಿರುವ ಶ್ರೀದೊಂಬಳೇಶ್ವರ ದೇವಾಲಯ ಕನ್ನಡಿಗರು ಮತ್ತು ತಮಿಳರ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀದೊಂಬಕಾಳೇಶ್ವರ ಸ್ವಾಮಿ, ಶ್ರೀಗೂಳೇಶ್ವರಸ್ವಾಮಿ ಮತ್ತು ಶ್ರೀವೀರಮಾಸ್ತಿ ಕೆಂಪಮ್ಮ ದೇವಸ್ಥಾನಗಳ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೊಂಗನೂರು ಗ್ರಾಮದಲ್ಲಿರುವ ದೊಂಬಕಾಳೇಶ್ವರ ದೇವಸ್ಥಾನವು ಮೂಲ ಸ್ಥಳವಾಗಿದ್ದು, ತಮಿಳುನಾಡು, ಮಂಡ್ಯ ಜಿಲ್ಲೆಯ ಮಳವಳ್ಳಿ ಹಾಗು ಚಾ.ನಗರ ಜಿಲ್ಲೆಯ ಭಕ್ತರು ಸೇರಿ ಹೊಂಗನೂರು ಗ್ರಾಮದಲ್ಲಿ ಭವ್ಯವಾದ ಮಂದಿರವನ್ನು ನಿರ್ಮಾಣ ಮಾಡಿದ್ದಾರೆ. ಇದೊಂದು ಭಾವೈಕ್ಯತೆಯ ಸಂಕೇತವಾಗಿದೆ. ತಮಿಳುನಾಡ ಭಕ್ತರು ಕರ್ನಾಟಕದಲ್ಲಿ ದೇವಸ್ಥಾನ ನಿರ್ಮಾಣ ಮಾಡಿರುವುದು ಸಾಮರಸ್ಯದ ಸಂಕೇತವಾಗಿದೆ ಎಂದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಹೊಂಗನೂರು ಭಾಗದ ಜನರು ನೀರಾವರಿ ಪ್ರದೇಶವನ್ನು ಹೊಂದಿ ಸಮೃದ್ದಿ ಜೀವನ ನಡೆಸಲು ಶ್ರೀದೊಂಬಕಾಳೇಶ್ವರ ಸ್ವಾಮಿಯ ಕೃಪಾ ಕಟಾಕ್ಷ ಇದೆ ಎಂದರು.
ಕಾರ್ಯಕ್ರಮದಲ್ಲಿ ಪೂಜಾ ವಿಧಾನ ನೇರವೇರಿಸಿಕೊಟ್ಟ ಡಾ. ಸೆಲ್ವ ಪಿಳ್ಯಾಂ, ಮಾಜಿ ಉಪ ಸಭಾಪತಿ ಡಾ.ಮರಿತಿಬ್ಬೇಗೌಡ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಹೊಂಗನೂರು ಚಂದ್ರು, ಟ್ರಸ್ಟ್ ಗೌರವ ಅಧ್ಯಕ್ಷ ಎಂ.ಎಸ್. ರಮೇಶ್, ಅಧ್ಯಕ್ಷ ಚಂದ್ರಶೇಖರ್, ಶಿವಕುಮಾರ್, ಎನ್. ಗುಣಶೇಖರ್, ಮಣಿ ಮಾಸ್ಟರ್, ಗ್ರಾ.ಪಂ. ಅಧ್ಯಕ್ಷೆ ರೂಪ, ಉಪಾದ್ಯಕ್ಷ ನವೀನ್, ಜಯರಾಜ್, ಮಣಿ, ಕಾಮಗೆರೆ ರವಿ ಇನ್ನಿತರರಿದ್ದರು.