ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ : ಮಡಿಕೇರಿ ಶಾಸಕ ಮಂತರ್‌ಗೌಡ ಹೇಳಿಕೆ

18ss3parichaya
Published on


ಕೊಡಗು : ಪಠ್ಯ ಅಭ್ಯಾಸದಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ವೃದ್ಧಿಸಿದರೆ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಮಡಿಕೇರಿ ಶಾಸಕ ಮಂತರ್‌ಗೌಡ ಹೇಳಿದರು.

ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಶನಿವಾರಸಂತೆ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.


ಕ್ರೀಡೆಯಲ್ಲಿ ಸೋಲು-ಗೆಲವು ಸಮಾನವಾಗಿ ಸ್ವೀಕರಿಸಿ, ಭಾಗವಹಿಸುವ ಗುಣ ಬೆಳೆಸಿಕೊಳ್ಳಬೇಕು. ಕ್ರೀಡಾಪಟುಗಳಿಗೆ ಸರ್ಕಾರದಿಂದಲೂ ಪ್ರೋತ್ಸಾಹ ದೊರಕುತ್ತಿದ್ದು, ಅವಕಾಶ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.


ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಕರೊನಾ ಹಿನ್ನೆಲೆ ಕಳೆದ ಮೂರು ವರ್ಷದಿಂದ ಕ್ರೀಡಾಕೂಟಗಳು ನಡೆದಿಲ್ಲ. ವಿದ್ಯಾರ್ಥಿಗಳು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿ ಎಂದು ಹೇಳಿದರು.


ಮಾಜಿ ಜಿ.ಪಂ. ಸದಸ್ಯ ಡಿ.ಬಿ.ಧರ್ಮಪ್ಪ ಮಾತನಾಡಿದರು, ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲೆ ಕೆ.ಆರ್.ಭಾರತಿ, ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ, ಸದಸ್ಯೆ ದಮಯಂತಿ, ಪಿಡಿಒ ಹರೀಶ್, ಮುಖಂಡರಾದ ಎಸ್.ಎಂ.ಡಿಸಿಲ್ವಾ, ಶಾಂತ್ವೆರಿ ವಸಂತ್, ಜೀವನ್, ವಿಜಯ್, ಶಿಕ್ಷಣ ಇಲಾಖೆಯ ಪರಿವೀಕ್ಷಕಿ ಸುಕುಮಾರಿ, ದೈಹಿಕ ಶಿಕ್ಷಕರ ಸಂಘದ ರತ್ನಕುಮಾರ್, ವಸತಿ ಶಾಲೆಯ ದೈಹಿಕ ಶಿಕ್ಷಕ ಅಲೋಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net