ದೈಹಿಕ ಮತ್ತು ಮಾನಸಿಕ ವೃದ್ಧಿಗೆ ಕ್ರೀಡೆ ಸಹಕಾರಿ

13 YERRISWAMY 05
Published on

ಬಳ್ಳಾರಿ : ಸದೃಢಢ ದೇಹಕ್ಕೆ ಆಟಗಳು ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ವೃದ್ಧಿಗೆ ಕ್ರೀಡಾಕೂಟಗಳು
ಸಹಕಾರಿಯಾಗುತ್ತವೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ. ಎಂ ಮುನಿರಾಜು ಹೇಳಿದರು.
ಇಲ್ಲಿನ ವಿಜಯನಗರ ಶ್ರಿಕೃಷ್ಣದೇವರಾಯ ವಿವಿಯ ಬಯಲು ರಂಗಮಂದಿರದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿಎಸ್‌ಕೆಯು ಪ್ರೊ ಕಬಡ್ಡಿ ಸೀಸನ್-1 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿವಿಯ ವಿದ್ಯಾರ್ಥಿಗಳು ರಾಷ್ಟಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ವಿವಿಯ ಕ್ರೀಡಾ ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. ಮುಂಬರುವ ದಿನಗಳಲ್ಲಿ ವಿವಿಯ ಎಲ್ಲ ವಿಭಾಗಗಳ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ವಿವಿ ಕುಲಸಚಿವ ಎಸ್. ಎನ್. ರುದ್ರೇಶ ಮಾತನಾಡಿ, ವಿವಿಯ ಮುಖ್ಯ ಆವರಣ ಹಾಗೂ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ವಿವಿಯಿಂದ ಅಗತ್ಯ ಸೌಲಭ್ಯವನ್ನು ಒದಗಿಸುವುದಾಗಿ ಹೇಳಿದರು.
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶಶಿಧರ ಕೆಲ್ಲೂರ ಮಾತನಾಡಿದರು. ಪ್ರಥಮ ಆವೃತ್ತಿಯ ಪ್ರೊ- ಕಬಡ್ಡಿ ಸೀಸನ್‌ನಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net