

ಚಿಕ್ಕಮಗಳೂರು: ದೈವಿಕ ಪರಂಪರೆಯ ವಾರಸುದಾರರು ನಾವಾಗಬೇಕು. ಆಚರಣೆ ಮೊದಲು, ಬೋಧನೆ ನಂತರ ಎಂಬುದು ಆದರ್ಶವಾಗಬೇಕು ಎಂದು ಶ್ರೀಸತ್ಯಸಾಯಿ ಸೇವಾಸಮಿತಿಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ತಿಳಿಸಿದರು.
ನಗರದ ಸಾಯಿ ಮಧುವನ ಬಡಾವಣೆಯ ಶ್ರೀಸತ್ಯಸಾಯಿ ಸೇವಾಕ್ಷೇತ್ರದಲ್ಲಿ ಶ್ರೀಸಾಯಿ ಬಾಬಾ ಅವರ ೯೯ನೆಯ ಜನ್ಮದಿನೋತ್ಸವವನ್ನು ಪ್ರಶಾಂತಿ ಧ್ವಜಾರೋಹಣ ನೆರವೇರಿಸಿ, ಮಂದಿರದಲ್ಲಿ ಜ್ಯೋತಿ ಪ್ರಜ್ವಲನಗೊಳಿಸಿ ಶನಿವಾರ ಮಾತನಾಡಿದರು.
ಪುಟಪರ್ತಿಯಲ್ಲಿ ೯೯ವರ್ಷಗಳ ಹಿಂದೆ ಜನಿಸಿ ಕುಗ್ರಾಮವನ್ನು ವಿಶ್ವದ ಆಧ್ಯಾತ್ಮಿಕ ಕೇಂದ್ರವಾಗಿಸಿದ ಕೀರ್ತಿ ಬಾಬಾ ಅವರಿಗೆ ಸಲ್ಲುತ್ತದೆ. ವೇದಸಾರವನ್ನು ಸುಲಭವಾಗಿ ಜನಮಾನಸಕ್ಕೆ ತಲುಪಿಸಿದವರು ಸಾಯಿಬಾಬಾ.ಟೀಕೆ, ಟಿಪ್ಪಣಿ, ಅವಹೇಳನ, ದೂಷಣೆ, ನಿಂದನೆ, ಅಪಮಾನ ಮಾಡಿದವರನ್ನೂ ಪ್ರೀತಿಸಿದವರು. ವಿಷ ಉಣ್ಣಿಸಿದವರನ್ನೂ ಪ್ರೀತಿಸುವ ಮೂಲಕ ಆದರ್ಶವಂತರಾಗಿ ಮಾದರಿಯ ಹಾದಿಯನ್ನು ನಿರ್ಮಿಸಿದ್ದಾರೆ ಎಂದರು.
ನಿಸ್ವಾರ್ಥ ಸೇವೆ ಬಹಳ ಮುಖ್ಯ. ದೇಹ, ಮಾತು ಮತ್ತು ಮನಸ್ಸು ಶುದ್ಧವಾದಾಗ ಹೃದಯವೂ ಪರಿಶುದ್ಧವಾಗುತ್ತದೆ. ಮಾಹಿತಿ ನೀಡುವುದಷ್ಟೇ ಅಲ್ಲ ಪರಿವರ್ತನೆಯೆ ಸಾಯಿ ಸಮಿತಿಯ ಆಶಯಗಳು. ಮಾತು ಮತ್ತು ಕ್ರಿಯೆ ಬೇರೆಯವರಿಗೆ ಆದರ್ಶಪ್ರಾಯವಾಗಿರಬೇಕು. ಜೀವನವೇ ಸಂದೇಶ ಎಂದು ಬಾಳಿ ಬದುಕಿದವರು ಸಾಯಿ ಬಾಬಾ ಎಂದು ಬಣ್ಣಿಸಿದರು.
ಇರುವುದೊಂದೇ ಜಾತಿ ಅದು ಮಾನವ ಜಾತಿ. ಇರುವುದೊಂದೇ ಧರ್ಮ ಅದು ಪ್ರೇಮಧರ್ಮ. ಇರುವುದೊಂದೇ ಭಾಷೆ ಅದು ಹೃದಯದ ಭಾಷೆ. ದೇವನೊಬ್ಬ ನಾಮ ಹಲವು. ದೈವಿಕ ಪರಂಪರೆಯ ವಾರಸುದಾರರಾಗಬೇಕೆಂಬುದು ಬಾಬಾ ಅವರ ಆಶಯವಾಗಿತ್ತು ಎಂದರು.
ಮನುಕುಲಕ್ಕೆ ಸ್ವಾಮಿಯ ಕೊಡುಗೆ ಅಮೂಲ್ಯ ಮತ್ತು ಅಪಾರ. ಶ್ರೀಸಾಯಿಬಾಬಾ ಅವರ ಆರೋಗ್ಯ, ಸಂಸ್ಕೃತಿ, ಧರ್ಮ, ಶಿಕ್ಷಣ, ಕುಡಿಯುವ ನೀರು, ವೇದ ಪ್ರಸಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆ ಜಗತ್ತು ಕಂಡು ಕೇಳರಿಯದಷ್ಟು ಅಗಾಧ. ಅವರ ಒಂದೊAದು ವಾಕ್ಯವೂ ಒಂದೊAದು ಸೂತ್ರ-ಮಂತ್ರ. ಪ್ರತಿ ಉಪನ್ಯಾಸವೂ ವೇದಗಳ ಸಾರ. ಯಾರನ್ನೂ ದ್ವೇಷಿಸಬಾರದು, ಸರ್ವರನ್ನೂ ಪ್ರೀತಿಸಬೇಕು ಎಂಬುದು ಪ್ರಮುಖ ಬೋಧನೆ ಎಂದರು.
ಪ್ರೇಮ ಮತ್ತು ಸೇವೆ ಬಾಬಾ ಅವರ ಪ್ರಮುಖ ಮಾನವೀಯ ತತ್ವ. ಜಗತ್ತು ಬದಲಾಗಲು ನಾನು ಮೊದಲು ಬದಲಾಗಬೇಕು. ಮೊದಲು ಆಚರಿಸು ನಂತರ ಬೋಧಿಸು. ಹೃದಯ ಪರಿಶುದ್ಧವಾದರೆ ದೇವರು ನೆಲೆಸುತ್ತಾನೆ. ಕ್ಷಮಿಸುವುದರಿಂದ ಮತ್ತು ಮರೆಯುವುದರಿಂದ ಪ್ರೇಮಮಯ ಜೀವನ ಸಾಧ್ಯ. ಕೊಡುವುದು ಮತ್ತು ಮರೆಯುವುದು ನಮ್ಮ ಸ್ವಭಾವ ಆಗಬೇಕು. ಯಾರನ್ನೂ ದೂಷಿಸದೆ, ದ್ವೇಷಿಸದೆ ಪ್ರೀತಿಸುವುದರಿಂದ ದೈವಿಕ ಪರಂಪರೆಯ ವಾರಸುದಾರ ನಾವಾಗಬಹುದು ಎಂದು ಹೇಳಿದರು.
ಶ್ರೀಸತ್ಯಸಾಯಿ ಸೇವಾಸಮಿತಿ ಸಂಚಾಲಕ ಟಿ.ಪಿ.ಭೋಜೇಗೌಡ ಸ್ವಾಗತಿಸಿ, ನಿರೂಪಿಸಿದರು. ಇದೇ ವೇಳೆ ಸಾಮೂಹಿಕ ಭಜನೆ ನಡೆಸಲಾಯಿತು. ಶ್ರೀಸತ್ಯಸಾಯಿ ಸೇವಾಟ್ರಸ್ಟ್ ಅಧ್ಯಕ್ಷ ಎಂ.ಆರ್.ನಾಗರಾಜ್, ಉಪಾಧ್ಯಕ್ಷ ಡಾ.ಚಂದ್ರಶೇಖರ್, ಕಾರ್ಯದರ್ಶಿ ಎಲ್.ಎಚ್.ಅಂಕೋಲೇಕರ್, ಜಿಲ್ಲಾ ಯುವಸಂಯೋಜಕ ರವಿ, ಜಿಲ್ಲಾ ಸೇವಾ ಸಂಯೋಜಕ ಎಸ್.ಆರ್.ವೆಂಕಟೇಶ್, ಜಿಲ್ಲಾ ಯುವ ಸಂಯೋಜಕ ಗೌತಮ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ರಾವ್ ಮತ್ತಿತರರು ಉಪಸ್ಥಿತರಿದ್ದರು.