

ಕೋಲಾರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ದೇಶಿ ಉತ್ಪನ್ನಗಳ ಟ್ರೈ ಮಳಿಗೆ ಪ್ರಾರಂಭವಾಗಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಅಂಬೇಡ್ಕರ್ ನಿಗಮ ವ್ಯವಸ್ಥಾಪಕಿ ಎಂ.ಆರ್ ಪ್ರತಿಮಾ ತಿಳಿಸಿದರು.
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಆದಿವಾಸಿಗಳು ಸಂಗ್ರಹಿಸುವ ಕಾಡು ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಗುರುವಾರ ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಟ್ರೈ ಮಳಿಗೆ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರತಿಯೊಂದು ವಸ್ತು ವಿದೇಶಿ ಮೂಲದ್ದಾಗಿದ್ದು, ಜನರು ಗುಣಮಟ್ಟವಿಲ್ಲದ ಆ ಉತ್ಪನ್ನಗಳಿಗೆ ಮಾರುಹೋಗಿದ್ದಾರೆ. ನಮ್ಮಲ್ಲಿಯೇ ಗುಣಮಟ್ಟದಿಂದ ಕೂಡಿದ ಉತ್ಪನ್ನಗಳು ಸಿಗುತ್ತಿದ್ದರೂ ಹೆಚ್ಚು ಜನರು ಬಳಸುವುದಿಲ್ಲ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ದೇಶದ ಬಂಡವಾಳ ವಿದೇಶಕ್ಕೆ ಹರಿದುಹೋಗುತ್ತಿದೆ. ದೇಸೀಯ ಉತ್ಪನ್ನಗಳನ್ನು ಬಳಸಿದರೆ ನಮ್ಮ ರೈತ, ಗುಡಿಗಾರಿಕೆ ಮಾಡುವವರು ಸದೃಢರಾಗಲು ಸಹಕಾರಿಯಾಗುತ್ತದೆ ಎಂದರು.
ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಬಳಕೆಯನ್ನು ತ್ಯಜಿಸಿ, ಸಾವಯವ ಮತ್ತು ಸ್ವದೇಶಿ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಅಲ್ಲದೆ ಸದೃಢ ಸಮಾಜಕ್ಕೂ ಅನುಕೂಲಕವಾಗಲಿದೆ ಎಂದರು.
ಮಳಿಗೆಯಲ್ಲಿ ದೇಸೀ ಉತ್ಪನ್ನಗಳಾದ ಜೇನುತುಪ್ಪ, ಸೀಗೇಕಾಯಿ, ಚಿಗರೆ, ಅಂಟವಾಳ ಕಾಯಿ ಪುಡಿ, ಸಿರಿಧಾನ್ಯ, ಕಾಫಿ ಪುಡಿ ಸೇರಿದಂತೆ ಅನೇಕ ದಿನಬಳಕೆ ವಸ್ತುಗಳು ಲಭ್ಯವಿದೆ ಎಂದು ತಿಳಿಸಿದರು.
ನಿಗಮದ ಗುಮಾಸ್ತೆ ಲಕ್ಷ್ಮೀದೇವಮ್ಮ, ಮೇದಾರ ಸಮುದಾಯದ ಮುಖಂಡರಾದ ಮಲ್ಲೇಶಪ್ಪ, ವೆಂಕಟರಮಣಪ್ಪ, ರಾಜಶಂಕರ್, ಆನಂದ, ಶಾಂತಕುಮಾರ್, ಸತೀಶ್, ವೆಂಕಟಸ್ವಾಮಿ, ನಾಗು, ಲೋಕೇಶ್, ರಾಜೇಶ್ ಮುಂತಾದವರು ಇದ್ದರು.