

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದರಿಂದ ದೇಸಿ ಉದ್ಯೋಗ ಮತ್ತು ರಾಷ್ಟ್ರ, ಸಮಾಜದ ಆರೋಗ್ಯ ಹೆಚ್ಚುತ್ತದೆ ಎಂದು ಕೊಲ್ಹಾಪುರ ಕನ್ನೆರಿಯ ಸಿದ್ದಗಿರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ರಾಜೀವ ದಿಕ್ಷೀತ ವಿಚಾರ ವೇದಿಕೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ವತಿಯಿಂದ ಬುಧವಾರ ಆಯೋಜಿಸಿದ್ದ ಶೀತಲತಂತ್ರಜ್ಞಾನ ಮೂಲಕ ಅಡುಗೆ ಗಾಣದ ಎಣ್ಣೆ ತಯಾರಿಕೆ ಉದ್ಯಮದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಲಬೆರಕೆ ಉತ್ಪನ್ನಗಳನ್ನು ಅದರಲ್ಲೂ ಕಳಪೆ ಅಡುಗೆ ಎಣ್ಣೆ ಬಳಕೆಯಿಂದ ಎಲ್ಲರಿಗೂ ಅನಾರೋಗ್ಯ ಕಾಡುತ್ತಿದೆ. ಅದನ್ನು ಗುಣಪಡಿಸಲು ಮತ್ತೆ ಇಂಗ್ಲಿಷ್ ಔಷಧ ಬಳಸಲಾಗುತ್ತಿದೆ. ಒಟ್ಟಾರೆ ದೇಸಿ ಉತ್ಪನ್ನ, ಔಷಧಿ, ಆಹಾರಗಳನ್ನು ಮರೆತು ಮುನ್ನಡೆದಿರುವುದು ನಮ್ಮ ಹಾಗೂ ನಮ್ಮತನದ ದಿವಾಳಿಗೆ ಸಾಕ್ಷಿಯಾಗುತ್ತಿದೆ ಎಂದರು.
ಕೆಲ ವರ್ಷಗಳಿಂದ ಶೀತಲ ತಂತ್ರಜ್ಞಾನ ಮೂಲಕ ಗಾಣದ ಅಡುಗೆ ಎಣ್ಣೆ ಉತ್ಪಾದಿಸಲಾಗುತ್ತಿದೆ. ಇದಕ್ಕೆ ಸಾವಯವ ಮೂಲಕ ಬೆಳೆದ ಶೇಂಗಾ, ಕೊಬ್ಬರಿ, ಎಳ್ಳು, ಸಾಸಿವೆ, ಬದಾಮ ಸೇರಿ ಸ್ಥಳೀಯ ಕೃಷಿ ಉತ್ಪನ್ನಗಳನ್ನು ಬಳಸಲಾಗುತ್ತಿದೆ. ಇದರಿಂದ ನಮ್ಮ ರೈತರಿಗೆ ಆರ್ಥಿಕ ಅನುಕೂಲ ಹಾಗೂ ನಮ್ಮವರಿಗೆ ಉತ್ತಮ ಆರೋಗ್ಯ ಸಾಧ್ಯ ಎಂದರು.
ರೈತರು, ವ್ಯಾಪಾರಿಗಳು ಆಸೆ ಪಡಬೇಕೆ ಹೊರತು ದುರಾಸೆಯಲ್ಲ. ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಪ್ರಾಮಾಣಿಕತೆ ಇರಲಿ. ಭಾರತವು ಪ್ರತಿಯೊಬ್ಬರಿಗೂ ತಮ್ಮ ಬದುಕು ಸುಂದರಗೊಳಿಸಲು ಅವಕಾಶ ನೀಡಿದೆ. ಸ್ಥಳೀಯ ಉತ್ಪನ್ನ, ಸಂಪ್ರದಾಯ, ಸಂಸ್ಕೃತಿ ಹಾಗೂ ಸಂಸ್ಕಾರ ಅಳವಡಿಸಿಕೊಂಡು ಉಳಿಸಿ, ಬೆಳೆಸಿದರೆ ಮಾತ್ರ ಭಾರತ ಭಾರತವಾಗಿ ಉಳಿಯಲಿದೆ ಎಂದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮಾತನಾಡಿದರು. ಅಡುಗೆ ಎಣ್ಣೆ ತಯಾರಿಕಾ ಉದ್ಯಮ ಸ್ಥಾಪಿಸಲು ಅಗತ್ಯವಿರುವ ಆರ್ಥಿಕ ಅನುಕೂಲ, ಬ್ಯಾಂಕ್ ಸಾಲ ಸೌಲಭ್ಯ, ಕೃಷಿ ಉತ್ಪನ್ನ, ಕಚ್ಚಾ ಪದಾರ್ಥ, ಕಾರ್ಮಿಕರ ಅಗತ್ಯತೆ, ಮಾರಾಟ ವ್ಯವಸ್ಥೆ ಕುರಿತು ಅನುಭವಿ ಉದ್ಯಮಿಗಳು ವಿಷಯ ಮಂಡಿಸಿದರು.
ಉದ್ಯಮಿ ಹನುಮಂತ ಮಾನೆ, ಡಾ. ಬಸವಾನಂದ ಸ್ವಾಮೀಜಿ, ಶ್ರೀಶೈಲ ಬದಾಮಿ, ಮಲ್ಲಿಕಾರ್ಜುನ ಸೊಲಗಿ, ರಾಜಶೇಖರ ಹೊನ್ನಪ್ಪನವರ, ಗಿರೀಶ ಚೌಡಕಿ, ಇತರರು ಇದ್ದರು.
ಪುರುಷೋತ್ತಮ ಮಾಡಿಕರ ಸ್ವಾಗತಿಸಿದರು. ಮಲ್ಲನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಕುಂಬಾರ ವಂದಿಸಿದರು.