ದೇಸಿ ಹತ್ತಿ ತಳಿಗಳನ್ನು ಕೃಷಿಯಲ್ಲಿ ಬಳಸಲು ಜಿ.ಕೃಷ್ಣಪ್ರಸಾದ್ ಮನವಿ

20
Published on

ಮೈಸೂರು: ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಸ್ವದೇಶಿ ಆಂದೋಲನದಿಂದ ನಗರದ ನೆಕ್ಸಸ್ ಸೆಂಟಲ್ ಮಾಲ್‌ನಲ್ಲಿ ಸೋಮವಾರ ರಾಷ್ಟ್ರೀಯ ಕೈಮಗ್ಗ ದಿನ ಆಚರಿಸಲಾಯಿತು.
ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ದೇಸಿ ಹತ್ತಿ ಸಂಸ್ಕೃತಿಯ ಪರಿಚಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪದ್ಮಶ್ರೀ ಡಾ.ಖಾದರ್ ವಲ್ಲಿ ಅವರು ರಾಗಿ ಮತ್ತು ನಮ್ಮ ಜೀವನದಲ್ಲಿ ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿ, ಭಾರತದ ದೇಸಿ ಆಹಾರವಾಗಿರುವ ರಾಗಿ, ಸುಸ್ಥಿರತೆಯ ಭವಿಷ್ಯದ ಬೆಳೆಯಾಗಿದೆ. ಎಲ್ಲ ಭಾರತೀಯರು ತಮ್ಮ ಮುಂದಿನ ಪೀಳಿಗೆ ಆರೋಗ್ಯಕರ ಮತ್ತು ಸುಸ್ಥಿರ ಜೀವನವನ್ನು ಹೊಂದಲು ಜೀವನದಲ್ಲಿ ರಾಗಿಯನ್ನು ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೈದರಾಬಾದ್‌ನ ಪರಿಸರವಾದಿ ಸುರೇಶ್ ಗುಪ್ತಾ (ಕಾಮನ್ ಮ್ಯಾನ್) ಮಾತನಾಡಿ, ಸುಸ್ಥಿರ ಅಭಿವೃದ್ಧಿ ಗುರಿ ಉದ್ದೇಶದಿಂದ ಎಲ್ಲ ಭಾರತೀಯರು ಭಾರತೀಯ ಸಾಂಪ್ರದಾಯಿಕ ಉಡುಗೆಯಾಗಿ ಖಾದಿ ಉದ್ಯಮವನ್ನು ಉತ್ತೇಜಿಸಬೇಕು. ಈ ಆಂದೋಲನದಲ್ಲಿ ಪ್ರತಿಯಾಗಿ ಬೆಂಬಲ ನೀಡಬೇಕು ಎಂದರು.
ಸಹಜ ಸಮೃದ್ಧ- ಸಾವಯವ ಕೃಷಿಕರ ಬಳಗದ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಮಾತನಾಡಿ, ಭಾರತದ ದೇಸಿ ಹತ್ತಿಯು ಗುಣಮಟ್ಟ ಮತ್ತು ಬಾಳಿಕೆಗೆ ಹೆಸರುವಾಸಿಯಾಗಿತ್ತು. ಅಮೆರಿಕದ ಕುಲಾಂತರಿ ಹತ್ತಿ ಆಗಮನದ ನಂತರ ದೇಸಿ ಹತ್ತಿ ವೈವಿಧ್ಯ ಕಣ್ಮರೆಯಾಗಿದೆ. ಕಾಣೆ ಆಗಿರುವ ಜಯಧರ, ಪಂಡರಾಪುರ ಮೊದಲಾದ ದೇಸಿ ಹತ್ತಿ ತಳಿಗಳನ್ನು ಕೃಷಿಯಲ್ಲಿ ಮತ್ತೆ ವಾಪಸ್ ತರಬೇಕಿದೆ ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net