ದೇಸಿ ತಳಿಗಳ ಸಂರಕ್ಷಣೆ ಕಾರ್ಯಕ್ರಮ: 31ರೊಳಗೆ ‘ಕೆ-ಕಿಸಾನ್’ನಲ್ಲಿ ನೋಂದಾಯಿಸಿ

Published on

ಮೈಸೂರು:  ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳನ್ನು ಸಂಗ್ರಹಣೆ ಮತ್ತು ಸಂರಕ್ಷಿಸುವ ಉದ್ದೇಶದಿಂದ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದಡಿ ಒಂದು ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು 2024 ರ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದು, ದೇಸಿ ತಳಿಗಳನ್ನು ಬೆಳೆದು ಸಂರಕ್ಷಣೆ ಮಾಡುತ್ತಿರುವ ರೈತರು ಮೇ 31ರೊಳಗೆ ಬೆಳೆಗಳ ವಿವರಗಳೊಂದಿಗೆ ಕೃಷಿ ಇಲಾಖೆಯ ಕೆ-ಕಿಸಾನ್ ಮೊಬೈಲ್ ಆಪ್ ಅಪ್ಲಿಕೇಷನ್‌ನಲ್ಲಿ ನೋಂದಾಯಿಸಕೊಳ್ಳಬಹುದಾಗಿದೆ.

ಆಯಾ ಪ್ರದೇಶದಲ್ಲಿ ರೈತರು ತಲೆಮಾರುಗಳಿಂದ ಬೆಳೆದ ಸಾಂಪ್ರದಾಯಿಕ ಪ್ರಭೇದಗಳು, ಸ್ಥಳೀಯ ಕೃಷಿ ಪದ್ಧತಿ ಮತ್ತು ಪ್ರದೇಶಕ್ಕೆ ಹೊಂದಿಕೊಂಡಿರುವ ವಿಶಿಷ್ಟ ಗುಣಲಕ್ಷಣದ ತಳಿಗಳೇ ದೇಸಿ ತಳಿಗಳು.

ಈ ಕಾರ್ಯಕ್ರಮದಡಿ ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂದೆ, ಮಡಕೆ ಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಸಾಮೆ, ಊದಲು, ಕೊರಲೆ, ಹಾರಕ, ಬರಗು, ಗೋಧಿ, ಮೆಣಸಿನಕಾಯಿ ಬೆಳೆಯ ತಳಿಗಳ ಸಂರಕ್ಷಣೆಗೆ ಅವಕಾಶ ಇದೆ. ಸಲಹಾ ಸಮಿತಿಯು ಶಿಫಾರಸು ಮಾಡುವ ಬೆಳೆಗಳನ್ನು ತರಲಾಗಿದೆ.

ಇತ್ತೀಚೆಗೆ ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಮೂಲ ಸಮೀಕ್ಷೆಯ ಮೂಲಕ ಗುರುತಿಸಿ ಸಂರಕ್ಷಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ರೈತರು ಭಾಗವಹಿಸಲು ಒಪ್ಪಿಗೆ ಇರಬೇಕು. ಬೀಜ ಬ್ಯಾಂಕ್‌ನಲ್ಲಿ ಬೀಜಗಳನ್ನು ಇರಿಸಲು ರೈತರು ಕಡ್ಡಾಯವಾಗಿ ಅಗತ್ಯ ಪ್ರಮಾಣದ ದೇಸಿ ತಳಿಗಳ ಬೀಜ ನೀಡಲು ಸಿದ್ಧರಿರಬೇಕು. ಜಾನುವಾರು ನಿರ್ವಹಣೆ, ಕೊಟ್ಟಿಗೆ ಗೊಬ್ಬರ ಎರೆಹುಳು ಗೊಬ್ಬರ ಮತ್ತು ಇತರ ಸುಸ್ಥಿರ ಕೃಷಿ ಚಟುವಟಿಕೆ ಕೈಗೊಂಡಿರಬೇಕು.

ಇದರಿಂದಾಗಿ ದೇಸಿ ತಳಿಗಳನ್ನು ನಿರಂತರ ಕೃಷಿ ಪ್ರೋತ್ಸಾಹಿಸಲು, ಜೀವ ವೈವಿಧ್ಯ ಬೆಂಬಲಿಸಲು ಹಾಗೂ ಸುಸ್ಥಿರ ಕೃಷಿ ಪದ್ಧತಿ ಪೋಷಿಸಲು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ. ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net