

ನಂಜನಗೂಡು: ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶನಿವಾರ ಜೆಎಸ್‌ಎಸ್ ಶಾಲಾ ಮಕ್ಕಳು ಹಾಗೂ ಗ್ರಾಮೀಣ ಜನತೆಗಾಗಿ ಆಯೋಜಿಸಲಾಗಿದ್ದ ದೇಸಿ ಆಟಗಳ ಕಲರವ ಜೋರಾಗಿತ್ತು.
ಜೆಎಸ್‌ಎಸ್ ಶಾಲಾ ಸಂಕೀರ್ಣ ಆವರಣದಲ್ಲಿ ನಡೆದ ದೇಸಿ ಆಟಗಳ ಸ್ಪರ್ಧೆಯಲ್ಲಿ ಜೆಎಸ್‌ಎಸ್ ಅಂತರ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮತ್ತೊಂದು ಮೈದಾನದಲ್ಲಿ ಗ್ರಾಮೀಣ ಜನರು ದೇಸಿ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.
ಪುರುಷರಿಗಾಗಿ ಮೂರು ವೃತ್ತಕಾರದ ಮಧ್ಯೆ ಇಡಲಾಗಿದ್ದ ಬುಗುರಿಗೆ ಗುನ್ನ ಹೊಡೆಯುವ ಸ್ಪರ್ಧೆ ಇತ್ತು. ವೃತ್ತಾಕಾರದಲ್ಲಿ ಇರಿಸಿದ್ದ ಐದು ಗೋಲಿಗಳನ್ನು ಐದು ಅವಕಾಶದಲ್ಲಿ ಹೊರಕೆಡವಲು ಕೈಚಳಕ ತೋರಿ ಗೆಲುವಿನ ನಗೆ ಬೀರಿದರು. ಕಲ್ಲುಗುಂಡು ಎತ್ತುವ ಸ್ಪರ್ಧೆಯಲ್ಲಿ ಯುವಕರು ಪರಾಕ್ರಮ ತೋರಿದರು. ಕೆಸರುಗದ್ದೆ ಓಟ, ಕೆಸರುಗದ್ದೆ ಹಗ್ಗ ಜಗ್ಗಾಟದಲ್ಲಿ ಗ್ರಾಮೀಣರು ತೊಡಗಿಸಿಕೊಂಡರು.
ಮಹಿಳೆಯರಿಗಾಗಿ ಆಯೋಜಿಸಿದ್ದ ಹಗ್ಗಜಗ್ಗಾಟ, ನಿಂಬೆಹಣ್ಣು ಚಮಚ ಸ್ಪರ್ಧೆ, ಅಳಗುಳಿಮನೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವುದು, ಅಣ್ಣೆಕಲು,್ಲ ತುಂಬಿದ ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು ಓಡುವ ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಕ್ರಮವಾಗಿ 2000, 1500 ಹಾಗೂ 1000 ರೂ. ಬಹುಮಾನ ನಿಗದಿ ಮಾಡಲಾಗಿದೆ. ಗುಂಪು ಸ್ಪರ್ಧೆಗೆ ಪ್ರಥಮ 5,000 ರೂ., ದ್ವಿತೀಯ 3,000 ರೂ. ಹಾಗೂ ತೃತೀಯ 2,000 ರೂ. ಬಹುಮಾನ ನಿಗದಿ ಮಾಡಲಾಗಿದೆ.
ಮಕ್ಕಳ ಕಲರವ: ಜೆಎಸ್‌ಎಸ್ ಅಂತರ ಶಾಲಾ ಮಟ್ಟದ ದೇಸಿ ಆಟಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗೋಲಿ, ಬುಗುರಿ, ಹುಲಿ-ಕುರಿ, ನವಕಂಕರಿ, ಹಾವು ಏಣಿಯಾಟ, ಚೌಕಬಾರ, ಚದುರಂಗ, ಕೆಸರುಗದ್ದೆ ಓಟ, ಮೈದಾನದಲ್ಲಿ ಹಗ್ಗಜಗ್ಗಾಟದಲ್ಲಿ ಬಾಲಕರು ಪಾಲ್ಗೊಂಡರೆ, ಆಣ್ಣೆಕಲ್ಲು, ಕುಂಟಬಿಲ್ಲೆ, ಹುಲಿಕುರಿ, ನವಕಂಕರಿ, ಹಾವುಏಣಿಯಾಟ, ಚೌಕಬಾರ, ಚದುರಂಗ ಹಾಗೂ ಅಳಗುಳಿ ಮನೆ ಆಟಗಳಲ್ಲಿ ಬಾಲಕಿಯರು ತಲ್ಲೀನರಾಗಿದ್ದರು.
ಬೆಂಗಳೂರು, ಹಾಸನ, ದಾವಣಗೆರೆ, ಹಾವೇರಿ, ಬಾಗಲಕೋಟೆ, ಮೈಸೂರು, ಚಾಮರಾಜನಗರ ಸೇರಿದಂತೆ ನಾನಾ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದು ಗಮನಾರ್ಹ. 74 ಜೆಎಸ್‌ಎಸ್ ಶಾಲೆಗಳಿಂದ 1217 ಬಾಲಕರು, 846 ಬಾಲಕಿಯರು ಪಾಲ್ಗೊಂಡಿದ್ದಾರೆ. 120 ಮಂದಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಮೇಲ್ವಿಚಾರಣೆ ಹಾಗೂ ತೀರ್ಪುಗಾರರಾಗಿ ನಿಯೋಜಿಸಲಾಗಿತ್ತು.
ಐದು ಹಂತದಲ್ಲಿ ಸ್ಪರ್ಧೆ ನಡೆಯಲಿದ್ದು, ಕ್ವಾರ್ಟರ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಮೂಲಕ ಅಂತಿಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ವಿಭಾಗಕ್ಕೆ ಆಯ್ಕೆ ಮಾಡಲಾಗುತ್ತಿದೆ. ವಿಜೇತರಿಗೆ ಪ್ರಶಸ್ತಿ ಫಲಕ ನೀಡಿ ಪುರಸ್ಕರಿಸಲಾಗುತ್ತದೆ.