

ಧಾರವಾಡ: ಇದು ಧಾರವಾಡ 71 ಕ್ಷೇತ್ರದ (ಗ್ರಾಮೀಣ) ಕುಗ್ರಾಮದಂತಿರುವ ಪ್ರದೇಶ. ಹೆಸರು ಹಾಶ್ಮಿನಗರ. ಎಲ್ಲ ವರ್ಗದ ಜನ ವಾಸಿಸುವ ಪ್ರದೇಶ. ಹುಬ್ಬಳ್ಳಿ- ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸುಸಜ್ಜಿತ ರಸ್ತೆಗಾಗಿ ಇಲ್ಲಿನ ಜನ ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದರೂ ಸಿಕ್ಕಿದ್ದು ಪುಕ್ಕಟೆ ಭರವಸೆಯೇ ಹೊರತು ಅಭಿವೃದ್ಧಿಯಲ್ಲ. ಹಾಗಾಗಿಯೇ ಇಲ್ಲಿನ ನಿವಾಸಿಗಳು, ಅಮೃತ ದೇಸಾಯಿ ಅವರೇ ಹಾಸ್ಮಿನಗರ ಮರೆತುಬಿಟ್ರಾ..? ಎಂದು ಪ್ರಶ್ನಿಸುತ್ತಿದ್ದಾರೆ.
ನಗರದ ಮಾಳಾಪುರದಿಂದ ಎತ್ತಿನಗುಡ್ಡಕ್ಕೆ ಹೋಗುವ ರಸ್ತೆಯಲ್ಲಿ ಹಾಶ್ಮಿನಗರ ಇದೆ. 8 ಅಡ್ಡರಸ್ತೆಗಳಿರುವ ಪ್ರದೇಶದಲ್ಲಿ ಅಂದಾಜು 1,200 ಮನೆಗಳಿವೆ. 24*7 ಕುಡಿಯುವ ನೀರಿನ ಸಂಪರ್ಕ ಇದ್ದು, ತೊಂದರೆ ಇಲ್ಲ. ವಿದ್ಯುತ್ ದೀಪದ ಸಮಸ್ಯೆ ಇಲ್ಲದಿದ್ದರೂ ತಂತಿ ಜೋತು ಬಿದ್ದು ಜನರಿಗೆ ತೊಂದರೆಯಾಗಿದೆ. ಗುಂಡಿಮಯ ಕಚ್ಚಾ ರಸ್ತೆಗಳು ಇಲ್ಲಿನ ನಿವಾಸಿಗಳ ಪ್ರಮುಖ ಸಮಸ್ಯೆಯಾಗಿದೆ.
ಶಾಸಕ ಅಮೃತ ದೇಸಾಯಿ ಪ್ರತಿನಿಧಿಸುವ ಧಾರವಾಡ- 71 (ಗ್ರಾಮೀಣ) ಕ್ಷೇತ್ರದ 8 ವಾರ್ಡ್ಗಳ ಪೈಕಿ ವಾರ್ಡ್ ನಂ. 4ರಲ್ಲಿದೆ ಹಾಶ್ಮಿನಗರ. 15 ಅಡಿಯ ಕಚ್ಚಾ ರಸ್ತೆಗಳಿದ್ದು, ಮಳೆಗಾಲದಲ್ಲಿ ರಾಡಿಮಯವಾಗುತ್ತವೆ. ರಸ್ತೆ ಪಕ್ಕ ಗಟಾರಗಳಿಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಜಮೆಯಾಗುತ್ತದೆ. ನಿರಂತರ ವಾಹನಗಳ ಸಂಚಾರದಿಂದ ಗುಂಡಿಮಯವಾಗಿದ್ದು, ಮಳೆಗಾಲದಲ್ಲಿ ಜನ ಹಾಗೂ ವಾಹನ ಸಂಚಾರ ಕಷ್ಟದಾಯಕ. ಜನರೇ ಸ್ವಂತ ಹಣ ವ್ಯಯಿಸಿ ಗುಂಡಿಮಯ ರಸ್ತೆಗಳಿಗೆ ಕೆಂಪು ಮಣ್ಣು ಹಾಕಿಸಿ ದುರಸ್ತಿ ಮಾಡಿಸಿಕೊಂಡ ಉದಾಹರಣೆಗಳಿವೆ. ಮಳೆಗಾಲ ಕಳೆಯುತ್ತಿದ್ದಂತೆ ವಾಹನಗಳ ಓಡಾಟದಿಂದ ವಿಪರೀತ ಧೂಳು ಹರಡುತ್ತಿದೆ.
ಜನಪ್ರತಿನಿಧಿಗಳಿಗೆ ದುಂಬಾಲು:
ಲೋಕಸಭೆ ಚುನಾವಣೆಗೂ ಮೊದಲು ಸಂಸದ ಪ್ರಲ್ಹಾದ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಹಾಶ್ಮಿನಗರಕ್ಕೆ ಭೇಟಿ ನೀಡಿದ್ದರು. 8 ಅಡ್ಡ ರಸ್ತೆಗಳಿಗೆ ಕಚ್ಚಾ ರಸ್ತೆ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಮುಂದಿನ ದಿನಗಳಲ್ಲಿ ಪಕ್ಕಾ ಸಿಮೆಂಟ್ ರಸ್ತೆ ನಿರ್ವಿುಸಿಕೊಡುವ ಭರವಸೆ ನೀಡಿದ್ದರು. ಆದರೆ ವರ್ಷಗಳೇ ಕಳೆದರೂ ರಸ್ತೆ ನಿರ್ವಣದ ಭರವಸೆ ಈಡೇರಿಲ್ಲ. ಈ ಬಗ್ಗೆ ಶಾಸಕ, ಸಂಸದ ಸೇರಿದಂತೆ ಪಾಲಿಕೆ ಅಧಿಕಾರಿಗಳಿಗೆ ಇಲ್ಲಿನ ನಿವಾಸಿಗಳು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಸಿಮೆಂಟ್ ರಸ್ತೆ, ಗಟಾರ ನಿರ್ವಣದ ಭರವಸೆ ಸಿಕ್ಕರೂ ಕಾಮಗಾರಿ ಕೈಗೊಳ್ಳುತ್ತಿಲ್ಲ ಎಂಬುದು ನಿವಾಸಿಗಳ ದೂರು.
ಎತ್ತಿನಗುಡ್ಡ ಮುಖ್ಯರಸ್ತೆ ಅರೆಬರೆ:
ಮತ್ತೊಂದೆಡೆ ಮಾಳಾಪುರದಿಂದ ಎತ್ತಿನಗುಡ್ಡಕ್ಕೆ ಹೋಗುವ ಮುಖ್ಯ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಇದ್ದ ಡಾಂಬರ್ ರಸ್ತೆ ಕಿತ್ತು ಕಲ್ಲು- ಕಡಿ ಹಾಕಿ ಹಾಗೇ ಬಿಡಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಧೂಳು ತಡೆಗೆ ಆಗೊಮ್ಮೆ ಈಗೊಮ್ಮೆ ಟ್ಯಾಂಕರ್ ನೀರು ಸಿಂಪಡಿಸುತ್ತಿರುವುದು ಸಮಾಧಾನಕರ ಸಂಗತಿ.
ಕಸ ವಿಲೇವಾರಿ ಸಮಸ್ಯೆ:
ಹಾಶ್ಮಿನಗರದಲ್ಲಿ ನಿಯಮಿತ ಕಸ ವಿಲೇವಾರಿಯಾಗದಿರುವುದು ಮತ್ತೊಂದು ಸಮಸ್ಯೆ. ಜನ ಎತ್ತಿನಗುಡ್ಡ ಮುಖ್ಯರಸ್ತೆಯ ಪಕ್ಕ ಕಸ ಹಾಕುತ್ತಿದ್ದಾರೆ. ಆದರೆ, 4 ದಿನಗಳಿಗೊಮ್ಮೆ ಕಸ ವಿಲೇವಾರಿಯಾಗುತ್ತಿದೆ. ಹೀಗಾಗಿ ಕೆಲವೊಮ್ಮೆ ಕಸಕ್ಕೆ ಬೆಂಕಿ ಹಾಕಿ ಸುಡುವುದೂ ಇಲ್ಲಿ ಸಾಮಾನ್ಯವಾಗಿದೆ.
ಹಾಶ್ಮಿನಗರ ಕುಗ್ರಾಮದಂತಿದೆ. ನಗರ ಪ್ರದೇಶವಾದರೂ ವಾರಸುದಾರರಿಲ್ಲದಾಗಿದೆ. ಸಂಸದ, ಶಾಸಕರು ಪಕ್ಕಾ ರಸ್ತೆ ನಿರ್ವಿುಸುವ ಭರವಸೆ ಈಡೇರಿಸಬೇಕು.- ಸದಾಶಿವ ಔದಿ, ಹಾಶ್ಮಿನಗರ ನಿವಾಸಿ
ಮನವಿ ಮಾಡಿ ಬೇಸತ್ತು ಕೆಲವೊಮ್ಮೆ ನಾವೇ ಹಣ ವ್ಯಯಿಸಿ ರಸ್ತೆ ದುರಸ್ತಿ ಮಾಡಿಸಿಕೊಂಡಿದ್ದೇವೆ. ರಸ್ತೆ, ಗಟಾರ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಕೂಡಲೆ ಸ್ಪಂದಿಸಬೇಕು.- ಎಂ.ಎಂ. ಬಾಳೆಕುಂದ್ರಿ, ಹಾಶ್ಮಿನಗರ ನಿವಾಸಿ
ಮಳೆಗಾಲದಲ್ಲಿ ರಾಡಿಯಾಗುವ ರಸ್ತೆಯಲ್ಲಿ ಜನ ನಡೆದಾಡಲು ಆಗುವುದಿಲ್ಲ. ಈಗ ಧೂಳಿನ ಸಮಸ್ಯೆ ಅನುಭವಿಸುತ್ತಿದ್ದೇವೆ. ಸಿಮೆಂಟ್ ರಸ್ತೆ, ಗಟಾರ ನಿರ್ವಣ, ಕಸ ವಿಲೇವಾರಿ ನಮ್ಮ ಬೇಡಿಕೆ.- ಬಶೀರ ಕಿತ್ತೂರ, ಹಾಶ್ಮಿನಗರ ನಿವಾಸಿ
ಹಾಶ್ಮಿನಗರ ಅಕ್ರಮ ಸಕ್ರಮ ಬಡಾವಣೆಯಾಗಿದ್ದು, ಅಲ್ಲಿನ ನಿವಾಸಿಗಳು ರಸ್ತೆ, ಚರಂಡಿ ನಿರ್ವಣಕ್ಕಾಗಿ ಮನವಿ ಮಾಡಿದ್ದಾರೆ. ಕೋವಿಡ್ನಿಂದಾಗಿ ಅನುದಾನದ ಕೊರತೆಯೂ ಆಗಿದೆ. ಎಸ್ಎಫ್ಸಿ ಅಥವಾ ಪಾಲಿಕೆ ಅನುದಾನ ಬಂದ ಕೂಡಲೆ ಅಲ್ಲಿನ ಕಾಮಗಾರಿಗೆ ಪ್ರಾಶಸ್ಱ ನೀಡಲಾಗುವುದು. ಅಮೃತ ದೇಸಾಯಿ, ಶಾಸಕ
ಹಾಶ್ಮಿನಗರದಲ್ಲಿ ಅಭಿವೃದ್ಧಿಗೆ ಪಾಲಿಕೆ ಅನುದಾನ ಬಳಸಲು ಬರುವುದಿಲ್ಲ. ಸರ್ಕಾರದಿಂದ ಹೆಚ್ಚುವರಿ ಬಿಡುಗಡೆಯಾಗುವ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಬಹುದು. ಶಾಸಕರ ಅನುಮೋದನೆಯೊಂದಿಗೆ ರಸ್ತೆ, ಗಟಾರ ಕಾಮಗಾರಿ ಕೈಗೊಳ್ಳಲಾಗುವುದು.- ಆರ್.ಎಂ. ಕುಲಕರ್ಣಿ, ಪಾಲಿಕೆ ವಲಯಾಧಿಕಾರಿ