ದೇಶಿ ತಳಿಗಳ ರಕ್ಷಣೆಗೆ ಗೋಪಾಲಕರ ಪಾತ್ರ ಮಹತ್ವ

30sor3
ಸೊರಬ ರಂಗನಾಥ ದೇವಸ್ಥಾನ ಆವರಣದಲ್ಲಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ ಗೋಪಾಲಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಚಿದಾನಂದ ಗೌಡ, ಪ್ರಭಾಕರ ರಾಯ್ಕರ್, ಕೃಷ್ಣಮೂರ್ತಿ ಭಾವೆ, ವೀರೇಂದ್ರ ಗೌಡ ಜೇಡಗೇರಿ, ನಾಗಪ್ಪ ಬಿದರಗೇರಿ ಇತರರಿದ್ದರು.
Published on

ಸೊರಬ: ಗ್ರಾಮೀಣ ಭಾಗದಲ್ಲಿ ದೇಶೀಯ ತಳಿಯ ಗೋವುಗಳ ರಕ್ಷಣೆಯಲ್ಲಿ ಗೋಪಾಲಕರ ಪಾತ್ರ ಮಹತ್ವದ್ದಾಗಿದೆ. ಮಲೆನಾಡು ಗಿಡ್ಡ ಸೇರಿದಂತೆ ಸ್ಥಳೀಯ ಗೋವುಗಳ ರಕ್ಷಣೆಗೆ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಬೇಕು ಎಂದು ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದ ಗೌಡ ಹೇಳಿದರು.

ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ 20ನೇ ವರ್ಷದ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ಗೋಪಾಲಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯನಿಗೆ ಜೀವನಪೂರ್ತಿ ಗೋತಾಯಿ ಹಾಲುಣಿಸುತ್ತಾಳೆ. ಆದ್ದರಿಂದಲೇ ಗೋವಿಗೆ ಮಹಾತಾಯಿ ಎಂದು ಕರೆಯುತ್ತೇವೆ. ಕಲಿಯುಗದ ಕಾಮಧೇನು ಎಂದು ಬಣ್ಣಿಸಲಾಗುತ್ತದೆ. ಗೋವುಗಳ ಸೇವೆ ಮಾಡುವುದು ಪುಣ್ಯದ ಕೆಲಸ. ಗೋವುಗಳ ರಕ್ಷಣೆ ಜತೆಗೆ ಗಣೇಶೋತ್ಸವದ ಸಂದರ್ಭದಲ್ಲಿ ಗೋಪಾಲಕರು, ಹೈನುಗಾರಿಕೆಯಲ್ಲಿ ತೊಡಗಿದವರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುವವರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಸನ್ಮಾನ ಸ್ವೀಕರಿಸಿದ ಆಂಬುಲೆನ್ಸ್ ಚಾಲಕ ಎಸ್. ರಾಮಣ್ಣ ಮಾತನಾಡಿ, ಸಮಿತಿಯಿಂದ ಗೌರವಿಸುತ್ತಿರುವುದು ಸಂತಸ ತಂದಿದೆ. ಸುಮಾರು 53 ವರ್ಷಗಳ ವೃತ್ತಿಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಿದ್ದೇನೆ. ಚಾಲಕ ವೃತ್ತಿ ಅತ್ಯಂತ ಸವಾಲಿನ ಮತ್ತು ಕಷ್ಟದಾಯಕವಾಗಿರುತ್ತದೆ ಎಂದರು.

ಸನ್ಮಾನ ಸ್ವೀಕರಿಸಿದ ಗೋಪಾಲಕ ಜೆ.ವಿ. ಗುರುರಾಜ್ ಪಾಟೀಲ್ ಮಾತನಾಡಿ, ಗೋ ಪಾಲನೆ ಮಾಡುವುದು ಖುಷಿಯ ಕೆಲಸ. ಗೋಪಾಲನೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿದ ನಂತರ ನಮ್ಮ ಕುಟುಂಬ ಉತ್ತಮ ಸ್ಥಿತಿಯಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ಬಸ್ ನಿರ್ವಾಹಕ ಕೆ.ವೀರಭದ್ರಪ್ಪ, ಉದ್ಯಮಿ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಕೆ.ಪ್ರಭಾಕರ ರಾಯ್ಕರ್, ಸದಸ್ಯ ಕೃಷ್ಣಮೂರ್ತಿ ಭಾವೆ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ ಜೇಡಗೇರಿ, ಉಪಾಧ್ಯಕ್ಷ ನಾಗಪ್ಪ ಎಸ್.ಬಿ. ಬಿದರಗೇರಿ, ಖಜಾಂಚಿ ರಾಜೇಂದ್ರ ಜೈನ್, ಸಂಘಟನಾ ಕಾರ್ಯದರ್ಶಿ ಯು.ಎಸ್. ಶರತ್ ಸ್ವಾಮಿ, ಕಾರ್ಯದರ್ಶಿ ಅಭಿ ಹೊಯ್ಸಳ, ಸಹ ಕಾರ್ಯದರ್ಶಿ ವೀರಭದ್ರ, ಸಿಂಪಿ ಸಮಾಜದ ಉಪಾಧ್ಯಕ್ಷ ಅನಿಲ್ ಕುಮಾರ್ ಬಾಂಬೋರೆ, ವಾಹನ ಚಾಲಕರ ಸಂಘದ ಅಧ್ಯಕ್ಷ ದಾನಶೇಖರ್, ಅಲೆಗ್ಸಾಂಡರ್ ಡಿಸೋಜಾ, ಬಸವರಾಜ ಹಳೇಸೊರಬ, ಚಂದ್ರಕಾಂತ ತವನಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net