ದೇಶಾಭಿಮಾನ ಮೂಡಿಸುವ ಕಲಾಕೃತಿ ಅನಾವರಣ 15ಕ್ಕೆ

Kalakruthi
Published on

ಚಿತ್ರದುರ್ಗ: ದೇಶದ ಬೆಳವಣಿಗೆ ಆರ್ಥಿಕತೆಯ ಮೇಲೆ ನಿರ್ಧಾರವಾಗಲಿದೆ. ಆ ಚಕ್ರ ಸುಭದ್ರವಾಗಿದ್ದರೆ, ಪ್ರಗತಿ ಎಂಬ ರಥಕ್ಕೆ ಯಾವ ಅಡೆ-ತಡೆಯೂ ಇಲ್ಲ. ಅದರ ಚಲನ ನಿರಂತರ ಎಂಬುದಕ್ಕೆ ಸಾಕ್ಷಿಯಾಗಿ ದೇಶಾಭಿಮಾನ ಮೂಡಿಸುವ ಕಲಾಕೃತಿಯೊಂದು ಕೋಟೆನಗರಿಯಲ್ಲಿ ಆ. 15ರಂದು ರಾಷ್ಟ್ರ ಧ್ವಜಾರೋಹಣ ನೆರವೇರಿದ ನಂತರ ಅನಾವರಣಗೊಳ್ಳಲಿದೆ.

ರಾಷ್ಟ್ರಧ್ವಜ, ಇಂಡಿಯಾ ಗೇಟ್, ಕಾಂಚನಗಂಗಾ, ಗಂಗಾನಂದಿ, ಗೌರಿ ಶಿಖರ, ಕಾಶಿ, ನವಿಲು, ನಾಲ್ಕು ಸಿಂಹ, ಹುಲಿ, ಆನೆ, ಸರ್ಪ, ಡಾಲ್ಫಿನ್‌ಗಳ ಚಿನ್ನಾಟ, ಕಮಲದ ಹೂ, ಆಲದ ಮರ, ಮಾವಿನ ಹಣ್ಣು, ಜನ-ಗಣ-ಮನ, ವಂದೇ ಮಾತರಂ, ವೀಣೆ, ಹಾಕಿ ಹೀಗೆ ಭಾರತದ ಪ್ರಮುಖ ಸ್ಥಳ, ಲಾಂಛನ ರಾಷ್ಟ್ರೀಯ ಗೀತೆ, ಪ್ರಾಣಿ, ಪಕ್ಷಿ, ಹೂ, ಮರ, ಕ್ರೀಡೆ, ಹಣ್ಣು ಒಳಗೊಂಡು ರಾಷ್ಟ್ರೀಯತೆ ಪ್ರತಿನಿಧಿಸುವ 18 ಅಂಶಗಳು ಒಂದೇ ಕ್ಯಾನ್ವಾಸ್ ಮೇಲೆ ಮೂಡಿಬಂದಿದ್ದು, ಎಲ್ಲರಲ್ಲೂ ದೇಶ ಪ್ರೇಮದ ರೋಮಾಂಚನ ಉಂಟು ಮಾಡಲು ಚಿತ್ರ ಕ್ಷಣ ಎಣಿಸುತ್ತಿದೆ.

ಚಿತ್ರ ನೋಡಿದವರಿಗೆ ಛಿದ್ರಗೊಂಡಿರುವುದನ್ನು ಅಖಂಡ ದೇಶವನ್ನಾಗಿಸಿ ಚಿತ್ರಿಸಿರುವಂತೆ ಭಾಸವಾಗುತ್ತದೆ. ಭಾರತ ಸದಾ ಆರ್ಥಿಕವಾಗಿದೆ. ಎಂದಿಗೂ ಅದರಿಂದ ಕಳಚಿ ಬೀಳುವ ಸಾಧ್ಯತೆಯೂ ಇಲ್ಲ ಎಂಬುದರ ಧ್ಯೋತಕವಾಗಿದೆ. ಈ ಪರಿಕಲ್ಪನೆಯನ್ನು ಸಮಸ್ತ ಭಾರತೀಯರಿಗೆ ಹೆಮ್ಮೆಯಿಂದ ಅರ್ಪಿಸಲು ಸಜ್ಜಾಗಿದ್ದಾರೆ ಚಿತ್ರ ರಚಿಸಿರುವ ಚಿತ್ರಕಲಾವಿದ ಕ್ರಿಯೇಟಿವ್ ವೀರೇಶ್.

ನಗರದ ಕ್ರಿಯೇಟಿವ್ ಆರ್ಟ್ ಗ್ಯಾಲರಿಯಲ್ಲಿ ಕಳೆದ 18 ದಿನದೊಳಗೆ ಸದ್ದಿಲ್ಲದೆ, ವೃತ್ತಾಕಾರದ ಸಂಯೋಜನೆಯಲ್ಲಿ ಸುಂದರ ರೂಪ ಪಡೆದಿದೆ. ಭಾವುಟ, ಲಾಂಛನ, ಚಿಹ್ನೆ ಸೇರಿ ರಾಷ್ಟ್ರೀಯತೆ ಪ್ರತಿನಿಧಿಸುವ ಅಂಶಗಳನ್ನು ಸಾಮಾನ್ಯವಾಗಿ ಪ್ರತ್ಯೇಕವಾಗಿ ನೋಡಿರುತ್ತೇವೆ. ಆದರೆ, ‘ನನ್ನ ದೇಶ’ ಕಲಾಕೃತಿ ಆ ಎಲ್ಲವನ್ನೂ ಎರಡು ಕಣ್ಣುಗಳಿಂದ ಕಣ್ತುಂಬಿಕೊಳ್ಳುವುದು ಮಾತ್ರವಲ್ಲ. ದೇಶ ನಮಗೇನು ಮಾಡಿದೆ ಎಂಬುದಕ್ಕಿಂತ ದೇಶಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರಶ್ನಿಸುವಂತಿದೆ.

ದೇಶದ ವಿಜಯದ ನಾಗಲೋಟವನ್ನು ಶ್ವೇತ ವರ್ಣದ ಅಶ್ವಮೇಧ ಕುದುರೆ ಹೊತ್ತು ಗಂಗಾನದಿಯೊಳಗೆ ಬಿರುಸಿನಿಂದ ಸಾಗುವಂತೆ, ಹೆಮ್ಮಯ ತ್ರಿವರ್ಣ ಧ್ವಜವನ್ನು ಸೊಂಡಿಲಿನಲ್ಲಿ ಎತ್ತಿ ಹಿಡಿದು ಘರ್ಜಿಸುವ ಗಜರಾಜ, ಸಾರೋಟಿನ ಕಡಾಣಿಯಾಗಿರುವ ಭಾರತದ ರೂಪಾಯಿ… ಹೀಗೆ ಪ್ರತಿ ಅಂಶವೂ ಒಂದೊಂದು ಸನ್ನಿವೇಶ ತೆರೆದಿಡುತ್ತಿವೆ.

ರಾಷ್ಟ್ರದ ಚಿತ್ರಕಲಾ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಲಾಗಿದೆ. ಇದು ಪ್ಯಾನ್ ಇಂಡಿಯಾ ಆರ್ಟ್. ಈ ಪರಿಕಲ್ಪನೆಗೆ ಜೀವ ತುಂಬಲು 4 ತಿಂಗಳು ನಿರಂತರ ಅಧ್ಯಯನ ನಡೆಸಿದೆ. ಜೂನ್ 12ರ ಮುಂಜಾನೆ ಮನದಲ್ಲಿ ಭಾರತಾಂಬೆ ನೆನೆದು, ಕ್ಯಾನ್ವಾಸ್ ಹಿಡಿದು ನಿಂತೆ. ಮೂರೇ ದಿನದಲ್ಲಿ ಒಂದು ರೂಪ ಪಡೆಯಿತು ಎಂದು ಸುದ್ದಿಗಾರರಿಗೆ ಮಂಗಳವಾರ ವೀರೇಶ್ ತಿಳಿಸಿದರು.

ಕಲಾಕೃತಿ ಕುರಿತು ಸಾಹಿತಿ ಲೋಕೇಶ್ ಅಗಸನಕಟ್ಟೆ, ಸಂಗೇನಹಳ್ಳಿ ಅಶೋಕ್‌ಕುಮಾರ್, ಮೃತ್ಯುಂಜಯಪ್ಪ ಕೂಡ ಇದೇ ವೇಳೆ ವಿವರಿಸಿದರು.

ಕಲಾಕೃತಿಗೆ ಸಂಗೀತ ಸ್ಪರ್ಶ: ನನ್ನ ದೇಶ ಕಲಾಕೃತಿಗೆ ಸಂಗೀತ ಸ್ಪರ್ಶ ನೀಡಲಾಗಿದೆ. 2.45 ನಿಮಿಷದ ಹಾಡು ಸಿದ್ಧಗೊಂಡಿದ್ದು, ಸಾಹಿತ್ಯ ಕೂಡ ಉತ್ತಮವಾಗಿದೆ. ಪ್ರದೀಪ್ ಚಂದ್ರ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಇದನ್ನು ಕೇಳುತ್ತಲೇ ಕಲಾಕೃತಿಯ ಮೇಕಿಂಗ್ ವಿಡಿಯೋ ಕಣ್ತುಂಬಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net