ದೇಶಾಭಿಮಾನ ಒದು ದಿನಕ್ಕೆ ಸೀಮಿತವಾಗದಿರಲಿ

Vpt-03-15-23
ವಿರಾಜಪೇಟೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆ ಸಮಾರಂಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು.
Published on

ವಿರಾಜಪೇಟೆ: ದೇಶಾಭಿಮಾನ ಒದು ದಿನಕ್ಕೆ ಸೀಮಿತವಾಗಬಾರದು. ಬದಲಾಗಿ ನಿರಂತವಾಗಿ ನಮ್ಮಲ್ಲಿ ಉಳಿಯಬೇಕು ಎಂದು ತಹಸೀಲ್ದಾರ್ ಎಚ್.ಎನ್.ರಾಮಚಂದ್ರ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರೃ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅಪ್ರತಿಮ ದೇಶಭಕ್ತರನ್ನು ಸ್ಮರಿಸುವ ಕೆಲಸವಾಗಬೇಕು. ಯಾವುದೇ ಜಾತಿ ಅಥವಾ ಧರ್ಮದ ಹೆಸರಿನಲ್ಲಿ ಬಾಳ್ವೆ ನಡೆಸದೆ, ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸಕ್ಕೆ ಎಲ್ಲರೂ ಸಹಕರಿಸಬೇಕು. ಅಂದು ಸ್ವಾತಂತ್ರೃಕ್ಕಾಗಿ ಕೊಡಗಿನ ಅನೇಕರು ಹೋರಾಟ ನಡೆಸಿದ್ದಾರೆ. ಇಂದಿನವರೂ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ. ರಾಷ್ಟ್ರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ನಾವೆಲ್ಲರೂ ಭಾರತೀಯರಾಗಿದ್ದು, ಭಾವೈಕ್ಯತೆ, ಬ್ರಾತೃತ್ವ, ರಾಷ್ಟ್ರಿಯ ಭಾವನೆ ಹಾಗೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ದೇಹದ ಪ್ರತಿ ಕಣದಲ್ಲೂ ದೇಶ ಪ್ರೇಮ ಉಕ್ಕಿ ಹರಿದಾಗ ಸ್ವಾತಂತ್ರೃ ಆಚರಣೆಗೆ ಹೊಸ ಮೆರಗು ಬರಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಭಾರತದ ಸಂಸ್ಕೃತಿ, ಜೀವ ಮತ್ತು ಪ್ರಕೃತಿಗಳ ನಡುವಿನ ನಂಟನ್ನು ಅರಿಯುವಲ್ಲಿ ವಿದೇಶಗಳು ವಿಫಲವಾಗಿವೆ. ಸೇನೆಯ ಶಕ್ತಿ, ದಬ್ಬಾಳಿಕೆಯಿಂದ ಭಾರತವನ್ನು ಆಳಬಹುದು ಎಂಬ ವಿದೇಶಿಯರ ನಂಬಿಕೆ ಹುಸಿಯಾಯಿತು. ವಿದೇಶಿಯರ ವಿರುದ್ಧದ ಹೋರಾಟ, ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಯೋಧರನ್ನು ನೆನೆಯುವ ಕೆಲಸವಾಗಲಿ ಎಂದರು.

ನಿವೃತ್ತ ಯೋಧರಾದ ಸಿ.ಎಸ್.ಮುತ್ತಪ್ಪ, ಚಮ್ಮಟ್ಟೀರ ಸಿ.ಕುಶಾಲಪ್ಪ, ನೆಲ್ಲಮಕ್ಕಡ ಮುದ್ದಯ್ಯ, ತೋರೇರ ಪಳಂಗಪ್ಪ, ಬಾಳಿಯಡ ಶಂಭು ಮಂದಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಉತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರು, 35 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ಸಾರ್ವಜನಿಕ ಆಸ್ಪತ್ರೆಯ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಎ.ಸಿ.ಮುತ್ತಮ್ಮ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಸಂದೇಶ ಸಾರುವ ನೃತ್ಯ ಪ್ರದರ್ಶಿಸಿದರು. ಜೆಪಿಎನ್‌ಎಂ ಶಾಲೆಯ ಮುಖ್ಯ ಶಿಕ್ಷಕ ಲಾಲ್‌ಕುಮಾರ್ ಮತ್ತು ವಿದ್ಯಾರ್ಥಿಗಳ ತಂಡ ರೈತಗೀತೆ ಪ್ರಸ್ತುತಪಡಿಸಿದರು.

ಇದಕ್ಕೂ ಮುನ್ನ ವಿರಾಜಪೇಟೆ ನಗರ ಠಾಣಾಧಿಕಾರಿ ರವೀಂದ್ರ ಅವರ ನೇತೃತ್ವದಲ್ಲಿ ಕವಾಯತು ಪ್ರದರ್ಶನ, ವಿವಿಧ ಶಾಲಾ ವಿದ್ಯಾರ್ಥಿಗಳ ಪಥಸಂಚಲನ ಹಾಗೂ ಗೌರವ ರಕ್ಷೆ ಸ್ವೀಕಾರ ಗಮನ ಸೆಳೆಯಿತು. ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ, ಡಿವೈಎಸ್‌ಪಿ ಮೋಹನ್ ಕುಮಾರ್, ಪೊಲೀಸ್ ವೃತ್ತನಿರೀಕ್ಷಕ ಶಿವರುದ್ರ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಕಂದಾಯ ಪರಿವೀಕ್ಷಕ ಎಂ.ಎಲ್.ಹರೀಶ್, ಸೈನಿಕರ ಸಂಘದ ಮಾಜಿ ಅಧ್ಯಕ್ಷ ಚಪ್ಪಂಡ ಹರೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ, ಶಿಕ್ಷಣ ಇಲಾಖೆ ಸಿಬ್ಬಂದಿ ಗಾಯತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net