ದೇಶಾಂಶ ಹುಡಗಿ ಪತ್ನಿಗೆ ಅಮ್ಮ ಗೌರವ ಪ್ರದಾನ

amma prashati
Published on

ಬೀದರ್: ಹಿರಿಯ ಸಾಹಿತಿ, ಲೇಖಕ ದೇಶಾಂಶ ಹುಡಗಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಮಹಾದೇವಮ್ಮ ಅವರಿಗೆ ಅಮ್ಮ ಪ್ರಶಸ್ತಿ-2020 ನೀಡಿ ಗೌರವಿಸಲಾಯಿತು.

ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ ಅಮ್ಮ ಪ್ರಶಸ್ತಿಯ ಗೌರವ ಪುರಸ್ಕಾರಕ್ಕೆ ದೇಶಾಂಶ ಹುಡಗಿ ಅವರು ಆಯ್ಕೆಯಾಗಿದ್ದರು. ಆದರೆ ಕಳೆದ ದಿ.25ರಂದು ಅವರು ನಿಧನರಾದ ಹಿನ್ನೆಲೆಯಲ್ಲಿ ನಗರದಲ್ಲಿರುವ ಅವರ ಮನೆಗೆ ತೆರಳಿ ಪತ್ನಿಗೆ ಪ್ರದಾನ ಮಾಡಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ನೂರಾರು ಸಾಹಿತಿಗಳನ್ನು ಬೆಳೆಸಿದ ಶ್ರೇಯಸ್ಸು ದೇಶಾಂಶ ಹುಡಗಿ ಅವರಿಗೆ ಸಲ್ಲುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.

ಅಮ್ಮ ಪ್ರಶಸ್ತಿ ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಸಲ ಮನೆಗೆ ತೆರಳಿ ಅಮ್ಮ ಪುರಸ್ಕಾರ ನೀಡಲಾಗಿದೆ. ಹುಡಗಿ ಅವರ ಅಗಲಿಕೆ ನಡುವೆಯೂ ಅವರ ಬೆನ್ನ ಹಿಂದಿನ ಬೆಳಕಿನಂತೆ ಜೀವನ ಸವೆಸುತ್ತಿರುವ ಪತ್ನಿ ಮಹಾದೇವಮ್ಮ ಅವರನ್ನು ಸತ್ಕರಿಸಿ ಅಗಲಿದ ಚೇತನಕ್ಕೆ ಗೌರವ ಸಲ್ಲಿಸಿದಂತಾಗಿದೆ ಎಂದರು.

ರತ್ನಕಲಾ ಮಹಿಪಾಲರೆಡ್ಡಿ, ಜಗದೇವಿ ದುಬಲಗುಂಡಿ, ಪ್ರೇಮಾ ಹೂಗಾರ, ವಿಜಯಲಕ್ಷ್ಮಿ, ವಿಜಯಭಾಸ್ಕರರೆಡ್ಡಿ , ಮಹಾದೇವರೆಡ್ಡಿ, ಬಸವರಾಜ, ಕನ್ಯಾಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net