

ಮಧುಗಿರಿ: ದೇಶವೇ ಸಂಕಷ್ಟದಲ್ಲಿರುವಾಗ ರಕ್ತದಾನ ಶಿಬಿರಗಳು ಅಗತ್ಯವಾಗಿದೆ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕುಂಚಿಟಿಗ ಒಕ್ಕಲಿಗ ಸಮುದಾಯ ಭವನದಲ್ಲಿ ರಕ್ತದಾನಿ ಶಿಕ್ಷಕರ ಬಳಗ, ರೋಟರಿ ಮಧುಗಿರಿ, ಕುಂಚಿಟಿಗ ಒಕ್ಕಲಿಗರ ಸಂಘ, ಸರ್ಕಾರಿ ನೌಕರರ ಸಂಘ, ಗುಡ್ ನೈಬರ್ ಇಂಡಿಯಾ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಅಂಬೇಡ್ಕರ್ ಸೇನೆ, ಜಯಕರ್ನಾಟಕ ಸಂಘಟನೆ, ಎನ್‌ಪಿಎಸ್ ನೌಕರರ ಸಂಘದಿಂದ ಕಾರ್ಗಿಲ್ ವಿಜಯೋತ್ಸವದ ಸ್ಮರಣಾರ್ಥ ಸೋಮವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಾಡಲು ಮುಂದಾಗಿರುವುದು ಸಮಾಜ ಸೇವೆಯ ಮುಖವನ್ನು ತೋರುತ್ತದೆ. ಯಾವುದೇ ಅಲೌಕಿಕ ಸಂಪತ್ತು ಸಹಾಯಕ್ಕೆ ಬರಲಾರದು. ನಮ್ಮಲ್ಲಿರುವ ದೈವಬಲ, ಆತ್ಮಸ್ಥೈರ್ಯವೇ ನಮ್ಮನ್ನು ಸಂಕಷ್ಟದಿಂದ ಪಾರು ಮಾಡಬಲ್ಲದು ಎಂದರು.
ತಹಸೀಲ್ದಾರ್ ಡಾ.ವಿಶ್ವನಾಥ್ ಮಾತನಾಡಿ, ಕರೊನಾ ಸಂಕಷ್ಟದಲ್ಲಿ ಸೈನಿಕರು ಹಾಗೂ ರೈತರನ್ನು ನೆನೆಯಬೇಕಿದೆ. ನೊಂದವರಿಗೆ ಪ್ರಾಣವಾಯು ನೀಡುವ ರಕ್ತದ ಅವಶ್ಯಕತೆಯಿದ್ದು, ಯಾರೂ ಮುಂದೆ ಬಂದಿಲ್ಲ. ಆದರೆ ಶ್ರೀಗಳ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ರಕ್ತದಾನಿ ಶಿಕ್ಷಕರ ಸ್ನೇಹ ಬಳಗದ ಶಶಿಕುಮಾರ್ ಮಾತನಾಡಿ, ಕರೊನಾ ಸೋಂಕು ಹರಡುತ್ತಿರುವುದರಿಂದ ಎಲ್ಲೂ ರಕ್ತದಾನ ಶಿಬಿರಗಳು ನಡೆಯುತ್ತಿಲ್ಲ. ರಕ್ತದ ಅಭಾವದ ಕಾರಣ ಸಾಕಷ್ಟು ಶಸಚಿಕಿತ್ಸೆ ನಡೆಯದೆ, ಮುಂದೂಡಲಾಗುತ್ತಿದೆ ಮತ್ತು ಅಗತ್ಯವಿರುವ ರೋಗಿಗಳಿಗೆ ರಕ್ತ ದೊರೆಯುತ್ತಿಲ್ಲ, ರಕ್ತವಿಲ್ಲದೇ ರೋಗಿಗಳು ಪರದಾಡುವಂತಾಗಿದ್ದರಿಂದ ಪ್ರತಿವರ್ಷದಂತೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು. ಶಿಬಿರದಲ್ಲಿ 68 ಯುನಿಟ್ ರಕ್ತವನ್ನು ಶೇಖರಿಸಿ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಕಳುಹಿಸಲಾಯಿತು. ಜಯ ಕರ್ನಾಟಕ ಸಂಟನೆಯ ತಿಮ್ಮರಾಜು, ಶಿಕ್ಷಕ ನರಸಿಂಹಮೂರ್ತಿ, ಶಿಕ್ಷಕ ಗಂಗಾಧರ್, ಶಿಕ್ಷಣ ಸಂಯೋಜಕ ಪ್ರಾಣೇಶ್, ನಿವೃತ್ತ ನೌಕರ ಸಂದ ಡಿ.ಎಸ್.ಸಿದ್ದಪ್ಪ ಇದ್ದರು.
ಕರೊನಾ ಸಂಕಷ್ಟದ ಸೈನಿಕ, ಹಾಗೂ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ. ಅದು ಎಲ್ಲ ಸರ್ಕಾರ ಸಾರ್ವಜನಿಕರ ಕರ್ತವ್ಯವಾಗಿದೆ. ರೋಗ ನಿರೋಧಕ ಶಕ್ತಿ ದೈವಬಲವೇ ನಮ್ಮನ್ನು ಕಾಪಾಡುತ್ತಿದೆ. ಇದು ಮಾನವೀಯ ಮೌಲ್ಯ ಕಿತ್ತುಕೊಳ್ಳುತ್ತಿರುವ ವೈರಸ್ ಆಗಿದೆ. ಶ್ರೀ ಹನುಮಂತನಾಥ ಸ್ವಾಮೀಜಿ, ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ