ದೇಶಪ್ರೇಮ ಮೂಡಿಸುವ ಸಾಹಸ ಕ್ರೀಡೆ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಭಿಮತ, ಶಿವಗಂಗೆಯಲ್ಲಿ 2 ದಿನಗಳ ತರಬೇತಿ ಸಮಾರೋಪ

dc trekking1
Published on

ದಾಬಸ್‌ಪೇಟೆ: ಜೀವನದ ಕ್ಲಿಷ್ಟಕರ ಪರಿಸ್ಥಿತಿಯನ್ನು ಸುಲಭವಾಗಿ, ಧೈರ್ಯವಾಗಿ ಎದುರಿಸುವ ಶಕ್ತಿ ಸಾಮರ್ಥ್ಯ ಬೆಳೆಸಿಕೊಳ್ಳಲು ಸಾಹಸ ಕ್ರೀಡೆಗಳು ಸಹಕಾರಿ ಎಂದು ಜಿಲ್ಲಾದಿಕಾರಿ ಕೆ.ಶ್ರೀನಿವಾಸ್ ಹೇಳಿದರು.

ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದಲ್ಲಿ ಬೆಂಗಳೂರು ಗ್ರಾಮಾಂತರ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಯುವ ಜನರಿಗೆ ಸಾಹಸ ಕ್ರೀಡಾ ತರಬೇತಿಯ 2 ದಿನಗಳ ಶಿಬಿರದ ಸಮಾರೋಪದಲ್ಲಿ ಭಾನುವಾರ ಮಾತನಾಡಿದರು.

ಯುವ ಸಮುದಾಯ ಸಾಹಸ ಕ್ರೀಡೆಗಳ ತರಬೇತಿ ಪಡೆದರೆ, ಪ್ರಕೃತಿ ವಿಕೋಪ ಸೇರಿ ಇತರ ಸಂಕಷ್ಟಗಳಲ್ಲಿ ಸಿಲುಕಿದವರನ್ನು ರಕ್ಷಿಸಲು ಅನುಕೂಲವಾಗುತ್ತದೆ ಎಂದರು.

ಎರಡು ದಿನಗಳ ತರಬೇತಿ ಸಮಯದಲ್ಲಿ ಶಿಲಾರೋಹಣ, ಅವರೋಹಣ, ನಕ್ಷೆ ವೀಕ್ಷಣೆ, ಪ್ರಥಮಚಿಕಿತ್ಸೆ, ಜಲಕ್ರೀಡೆ ಬಗ್ಗೆ ತರಬೇತಿ ಪಡೆದಿರುವ ಇತರರೊಂದಿಗೂ ಹಂಚಿಕೊಂಡು, ಕಲಿಸಬೇಕು ಎಂದು ಮನವಿ ಮಾಡಿಕೊಂಡರು.

ಟ್ರೆಕ್ಕಿಂಗ್ ಮಾಡಿದ ಡಿಸಿ: ಸಮಾರೋಪದ ಸಮಾರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಶಿಬಿರದಲ್ಲಿ ತರಬೇತಿ ಪಡೆದ ಯುವಕರ ಜತೆ ಶಿವಗಂಗೆ ಬೆಟ್ಟದ ಟ್ರೆಕ್ಕಿಂಗ್ ಮಾಡಿದರು. ಸೋಂಪುರ ಹೋಬಳಿಯ ದೇವರಕೆರೆಯಲ್ಲಿ ಜಲಕ್ರೀಡೆ ಮತ್ತು ಬೋಟಿಂಗ್ ಮಾಡಿದರು.

ಅಪರ ಜಿಲ್ಲಾಧಿಕಾರಿ ವಿಜಯಾ ಇ. ರವಿಕುಮಾರ್ ಮಾತನಾಡಿ, ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪಂಗಡದ 45 ಯುವಕರಿಗೆ ಸಾಹಸ ಮತ್ತು ಜಲಕ್ರೀಡೆಯ ತರಬೇತಿ ನೀಡಲಾಗಿದೆ ಎಂದರು.

ನೆಲಮಂಗಲ ತಹಸೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಇಲಾಖೆ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ಸಮುದಾಯಕ್ಕೆ ಉತ್ತೇಜನ ನೀಡುತ್ತಿದೆ ಎಂದು ಮಾಹಿತಿ ನಿಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಚೆಲುವಾಂಬ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಲಹೆಗಾರ ಕೀರ್ತಿ, ವ್ಯವಸ್ಥಾಪಕ ಮುನಿರಾಜು, ರಾಜಸ್ವ ನೀರಿಕ್ಷಕ ಎಚ್.ಎಂ. ಕುಮಾರಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net