

ಬೀದರ್: ದೇಶದ್ರೋಹಿಗಳು, ಪಾಕ್ ಪರ ಘೋಷಣೆ ಹಾಕಿದವರನ್ನು ಮತ್ತು ಇವರ ಬೆನ್ನಿಗಿರುವವರನ್ನು ಬಂಧಿಸಿ ಎಲ್ಲರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ(ಕೋಕಾ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಿ ಕಠಿಣ ಕ್ರಮಕ್ಕೆ ಗುರಿಪಡಿಸಬೇಕೆಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆಯಿಂದ ಸೋಮವಾರ ಇಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ದೇಶದ ಅನ್ನ ತಿಂದು, ಎಲ್ಲ ಸೌಲಭ್ಯ ಪಡೆದು ಪಾಕ್ ಪರ ಘೋಷಣೆ ಕೂಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಅಮೂಲ್ಯ ಲಿಯೋನ್ ಎಂಬಾಕೆ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ. ಇದು ಕೇವಲ ಆಕೆಗೆ ಮಾತ್ರ ಸೀಮಿತವಲ್ಲ. ಇದರ ಹಿಂದೆ ಪ್ರಬಲವಾದ ದೇಶದ್ರೋಹಿ ಶಕ್ತಿಗಳ ವ್ಯವಸ್ಥಿತವಾದ ಪಿತೂರಿ ಅಡಗಿದಂತಿದೆ. ಸಿಎಎ ಮುಂದಿಟ್ಟುಕೊಂಡು ಮುಸ್ಲೀಮರು ಸೇರಿ ಕೆಲ ಸಮುದಾಯದವರಿಗೆ ದೇಶದ ವಿರುದ್ಧ ಎತ್ತಿ ಕಟ್ಟುವ ಕೆಲಸ ನಡೆದಿದೆ. ಇದೇ ನೆಪದಲ್ಲಿ ದೇಶದ್ರೋಹಿ, ಸಮಾಜಘಾತುಕ ಶಕ್ತಿಗಳೆಲ್ಲ ಒಟ್ಟಾಗಿ ದೇಶ ವಿರೋಧಿ ಕೆಲಸದಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಹೀಗಾಗಿ ಈ ಎಲ್ಲ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದಿಂದ ನಡೆಸಬೇಕೆಂದು ಆಗ್ರಹಿಸಿದರು.
ಬೇಡಿಕೆ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ವೇದಿಕೆ ಕಲಬುರಗಿ ವಿಭಾಗ ಸಂಚಾಲಕ ಶಿವಶರಣಪ್ಪ ಪಾಟೀಲ್, ಜಿಲ್ಲಾ ಸಂಚಾಲಕ ಶರಣು ಬಿರಾದಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ಪುಷ್ಪಕ್ ಜಾಧವ್, ಸಚಿನ್ ಮಲ್ಕಾಪುರೆ, ವಿಶಾಲ ಅತಿವಾಳೆ, ಸಂತೋಷ ಬಂಡೆ, ಚೇತನ್ ಸೋರಳ್ಳಿ, ಸೀನು ಮಾಶೆಟ್ಟಿ, ಜಗಮೋಹನ್ ರಾಜಪುತ, ಸಚಿನ್ ಪಾಟೀಲ್, ಸತೀಶ ಪಾರಾ, ಸಾಗರ ಪಾಠಕ್, ವಿನಾಯಕ ದೇಶಪಾಂಡೆ ಇತರರಿದ್ದರು.