

ಬಾಗಲಕೋಟೆ: ಈದ್ ಮಿಲಾದ್ ಸಂದರ್ಭದಲ್ಲಿ ಇಸ್ಲಾಮಿಕ್ ದೇಶಗಳ ಪ್ರದರ್ಶನ ಮಾಡಿದ ಕಿಡಿಗೇಡಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ವಿಭಾಗದ ಕೇಂದ್ರ ಪ್ರಮುಖ ಶ್ರೀಕಾಂತ ಶೆಟ್ಟಿ ಎಚ್ಚರಿಕೆ ನೀಡಿದರು.
ನಗರದ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಭಾನುವಾರ ರಾಷ್ಟ್ರ ರಕ್ಷಾ ಆಂದೋಲನಾ ಸಮಿತಿಯಿಂದ ಇಸ್ಲಾಮಿಕ್ ದೇಶಗಳ ಧ್ವಜ ಪ್ರದರ್ಶನ ವಿರೋಧಿಸಿ ಆಯೋಜಿಸಿದ್ದ ಜನಾಕ್ರೋಶ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮುಖ್ಯ ವಕ್ತರರಾಗಿ ಅವರು ಮಾತನಾಡಿದರು.
ಬಾಗಲಕೋಟೆಯಲ್ಲಿ ಶಿವಾಜಿ ಪ್ರತಿಮೆ ತೆರವುಗೊಳಿಸುವ ಪೊಲೀಸರು ಪ್ಯಾಲಿಸ್ತಿನ್ ಧ್ವಜ ಹಿಡಿದವರನ್ನು ಬಂಽಸುವ ತಾಕತ್ತು ಇಲ್ಲವಾಗಿದೆ. ಇಸ್ಲಾಮಿಕ್ ದೇಶದ ಧ್ವಜ ಹಿಡಿದವರ ಮೇಲೆ ಯಾಕೆ ದೇಶ ದ್ರೋಹದ ಪ್ರಕರಣ ದಾಖಲಿಸಿಲ್ಲ. ಪ್ಯಾಲಿಸ್ತಿನ್ ಧ್ವಜ ಹಿಡಿಯುವವರು ಅವರ ಪರವಾಗಿದ್ದರೆ ಅಲ್ಲಿಗೆ ಹೋಗಬೇಕು. ಹೋಗುವವರಿದ್ದರೆ ಹಿಂದೂ ಸಮಾಜ ಖರ್ಚು ನೀಡಲಿದೆ. ಇಲ್ಲಿ ಯಾಕೆ ಧ್ವಜ ಹಾರಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳ ಎಚ್ಚರವಾಗಿ : ರಾಜ್ಯದಲ್ಲಿ ಈಗಿರುವ ಸರ್ಕಾರದ ಮುಖ್ಯಮಂತ್ರಿಗಳು ಮತಾಂಧ ಶಕ್ತಿಗಳಿಗೆ ನೈತಿಕ ಬಲ ನೀಡಿದ ಪರಿಣಾಮದಿಂದ ಮತ್ತು ಜಾತ್ಯಾತೀತ ಶಕ್ತಿವಾದಿಗಳ ಮೌನ ಸಮ್ಮತಿಯಿಂದಲೇ ಹಿಂದೂಗಳ ಹಬ್ಬದಲ್ಲಿ ಗಲಾಟೆ, ಗದ್ದಲ ಹೆಚ್ಚಾಗುತ್ತಿವೆ. ದೇಶದ್ರೋಹಿಗಳ ಹುಚ್ಚಾಟ ಹೆಚ್ಚಾಗುತ್ತಿದೆ. ಹಿಂದೂಗಳ ಎಚ್ಚರವಾಗಬೇಕು ಹಾಗೂ ಸೇಡಿನ ಉತ್ತರಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು.
ಸಮಗ್ರ ತನಿಖೆ ಮಾಡಿ: ಬಾಗಲಕೋಟೆಯಲ್ಲಿ ಪ್ಯಾಲಿಸ್ತಿನಿ, ಬಾಂಗ್ಲಾದೇಶ, ಸೌದಿ ಅರೆಬಿಯಾ ಸೇರಿದಂತೆ ಇಸ್ಲಾಮಿಕ ದೇಶದ ಧ್ವಜ ಹಾರಿಸುವವರು ಹಿಂದೆ ಸಮಾಜ ಘಾತುಕ ಶಕ್ತಿಗಳಿವೆ. ಇವರಿಗೆ ವಿದೇಶಗಳಿಂದ ಫಂಡಿಂಗ್ ಮಾಡಲಾಗುತ್ತಿದೆ. ಬಾಗಲಕೋಟೆಯಲ್ಲಿ ಧ್ವಜ ಹಾರಾಡಲು ಯಾರು ಸೂಚನೆ ನೀಡಿದರು. ಇವರ ಹಿಂದೆ ಯಾವ ಸಂಘಟನೆ ಮತ್ತು ಇವರಿಗೆ ಫಂಡ ಮಾಡುತ್ತಿರುವವರು ಯಾರು ಎಂಬುದರ ಕುರಿತು ಸಮಗ್ರ ತನಿಖೆ ಪೊಲೀಸ್ ಇಲಾಖೆ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಮೊಹ್ಮದ ಪೈಗಂಬರ ಜೀವನದಲ್ಲಿ ನಡೆದ ಭದ್ರಿ ಯುದ್ಧದ ಮಾದರಿಯಲ್ಲಿ ಮಾಡುತ್ತೇವೆ ಎಂಬ ಸಂಕೇತದಲ್ಲೇ ಬಾಗಲಕೋಟೆಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ೩೧೩ ಸಂಖ್ಯೆಯ ಧ್ವಜ ಹಿಡಿದು ಕಿಡಿಗೇಡಿಗಳು ಪ್ರದರ್ಶನ ಮಾಡಿದ್ದಾರೆ. ಹಿಂದೂಗಳು ಎಚ್ಚರವಾಗಬೇಕು ಎಂದರು.
ಹಿಂದೂ ಜಾಗರಣ ವೇದಿಕೆಯ ಪ್ರಮುಖ ಕುಮಾರಸ್ವಾಮಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಗಣೇಶ ಹಬ್ಬದಲ್ಲಿ ಗಣೇಶಭಾವಚಿತ್ರದ ಹಿಡಿದು ಮೆರವಣಿಗೆ ಮಾಡಿದವರ ಪೋಟೋ ಕಸಿದುಕೊಂಡು ಹೋಗುವ ಪೊಲೀಸರು ಪ್ಯಾಲಿಸ್ತೀನ್ ಧ್ವಜ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದವರನ್ನು ಯಾಕೆ ಹಿಡಿಯಲು ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕವನ್ನು ಕೇರಳ ಮಾದರಿ ಮಾಡಲು ಹೊರಟಿದ್ದಾರೆ ಎಲ್ಲ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಾಗಲಕೋಟೆ ಜಿಲ್ಲೆಯ ನಾಲ್ಕು ಕಡೆ ಇಸ್ಲಾಮಿಕ್ ದೇಶಗಳ ಭಾವುಟ ಹಿಡಿದವರ ಮೇಲೆ ಕೇಸ್ ದಾಖಲು ಆಗಬೇಕು. ಮೂರು ಕಡೆ ಆಗಿದೆ ಒಂದು ಕಡೆ ಪ್ರಕರಣ ದಾಖಲಾಗಿಲ್ಲ. ದೇಶದ್ರೋಹ ಪ್ರಕರಣವನ್ನು ದಾಖಲಿಸಿಲ್ಲ. ಚಾರ್ಜಶೀಟ್ ಸಲ್ಲಿಸುವಾಗದರೂ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸದಿದ್ದರೆ ಹಿಂದೂ ಸಮಾಜ ಹೋರಾಟ ಮಾಡಲು ಸಜ್ಜಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸಭೆ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಕಿರಣ್ ಪವಾಡಶೆಟ್ಟರ, ಕುಮಾರಸ್ವಾಮಿ ಹಿರೇಮಠ, ರವಿ ಪಟ್ಟಣದ, ಬಸವರಾಜ ಯಂಕಂಚಿ, ಜಯಂತ ಕುರಂದವಾಡ, ರಾಜು ನಾಯ್ಕರ, ಗುಂಡೂರಾವ್ ಸಿಂಧೆ, ನಾಗೇಶ ಚಿತ್ರವಾಣ, ರಾಜಕುಮಾರ ಲಮಾಣಿ, ಶಿವು ಬಡಿಗೇರ, ಬಸೆಟ್ಟಪ್ಪ ಅಂಗಡಿ ಇತರರು ಇದ್ದರು.