

ಬೀದರ್: ಡ್ರಗ್ಸ್ ದಂಧೆಯಲ್ಲಿ ತೊಡಗಿದವರ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಬೇಕು ಹಾಗೂ ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಸಮಿತಿ ನಗರದಲ್ಲಿ ಶನಿವಾರ ಪತ್ರ ಚಳವಳಿ ನಡೆಸಿತು.
ಪ್ರಧಾನ ಅಂಚೆ ಕಚೇರಿಗೆ ತೆರಳಿದ ಕಾರ್ಯಕರ್ತರು ಬೇಡಿಕೆ ಸಂಬಂಧ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಅಂಚೆ ಬಾಕ್ಸ್ ನಲ್ಲಿ ಹಾಕಿ, ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ರೇವಣಸಿದ್ದ ಜಾಡರ್ ಮಾತನಾಡಿ, ಇತ್ತೀಚೆಗೆ ರಾಜ್ಯದಲ್ಲಿ ಡ್ರಗ್ಸ್ ಪ್ರಕರಣಗಳು ಅಧಿಕವಾಗಿ ಪತ್ತೆಯಾಗುತ್ತಿವೆ. ಶ್ರೀಮಂತ ಕುಟುಂಬದವರು, ಸ್ಯಾಂಡಲ್ ವುಡ್ ನಟ, ನಟಿಯರು, ರಾಜಕಾರಣಿಗಳ ಮಕ್ಕಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಸಮಾಜಕ್ಕೆ ಮಾದರಿ ಆಗಬೇಕಾದವರೆಲ್ಲ ಇಂಥ ಚಟಗಳಿಗೆ ಅಂಟಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆನ್ ಲೈನ್ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಮಾದಕ ವ್ಯಸನ ಜಾಲದ ಗ್ರಾಹಕರಾಗಿದ್ದಾರೆ. ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದವರ ವಿರುದ್ಧ ದೇಶದ್ರೊಹ ಅಡಿ ಪ್ರಕರಣ ದಾಖಲಿಸುವ ಮೂಲಕ ದೇಶ, ರಾಜ್ಯವನ್ನು ಉಳಿಸಬೇಕು. ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ನಗರ ಉಪಾಧ್ಯಕ್ಷ ಅನೀಲ ಚೌಧರಿ ಮಾತನಾಡಿ, ಡ್ರಗ್ಸ್ ಮಾಫಿಯಾ ತಡೆಯುವ ನಿಟ್ಟಿನಲ್ಲಿ ಪರಿಷತ್ ವಿವಿಧ ರೀತಿಯ ಅಭಿಯಾನ ಹಮ್ಮಿಕೊಂಡಿದೆ. ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವವರೆಗೆ ನಿಲ್ಲದು ಎಂದರು.
ಎಬಿವಿಪಿ ನಗರ ಅಧ್ಯಕ್ಷ ಶಾಂತಕುಮಾರ ಸಂಗೋಳಗೆ, ರಾಜ್ಯ ಕಾರ್ಯಕಾರಿ ಸದಸ್ಯ ಅಮರ ಸುಲ್ತಾನಪುರೆ, ಅರವಿಂದ ಸುಂದಳಕರ್, ವಿಕಾಸ ಚೋರಮಲ್ಲೆ, ಸಾಯಿ ಮೂಲಗೆ, ವಿಶಾಲ ಅತಿವಾಳ, ಪ್ರದೀಪರಡ್ಡಿ, ಮಹೇಶ, ಅಮರ, ದಿನೇಶ ಮೂಲಗೆ ಇತರರಿದ್ದರು.