ದೇಶದಲ್ಲಿ ಹೆಚ್ಚುತ್ತಿದೆ ಭ್ರಷ್ಟಾಚಾರ, ನಿರುದ್ಯೋಗ: ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಕಳವಳ

35
Published on

ಮೈಸೂರು: ಭಾರತ ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದ್ದು, ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ವ್ಯಾಸಂಗ ಮಾಡಬೇಕು. ಭಾರತೀಯ ಸೇನೆಗೆ ಸೇರುವ ಮುಖಾಂತರ ಈ ದೇಶವನ್ನು ರಕ್ಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.
ನಗರದ ಮಹದೇವಪುರದಲ್ಲಿರುವ ಸಿ.ಎನ್.ಎಂ. ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬ್ರಿಟಿಷರು 200ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತವನ್ನು ಆಳಿದ ಈ ದೇಶವನ್ನು ಬರಿದು ಮಾಡಿ ಹೋಗಿದ್ದರು. ಈಗ ಸ್ವಾತಂತ್ರ್ಯ ಬಂದು 76 ವರ್ಷವಾದರೂ ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚುತ್ತಿದೆ. ದೇಶಾಭಿಮಾನ ಕಡಿಮೆ ಆಗುತ್ತಿದೆ. ಆದ್ದರಿಂದ ಪಾಲಕರು ಮಕ್ಕಳಿಗೆ ಸ್ವಾತಂತ್ರ್ಯದ ಪ್ರಾಮುಖ್ಯತೆ ಗೊತ್ತಾಗಬೇಕಾದರೆ ದೇಶಾಭಿಮಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದರು.
ಹಿಂದೆ ಓದುವಾಗ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಆದರೆ ಈಗ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದೆ. ಕೆಲಸ ಸಿಗುತ್ತಿಲ್ಲ. ಆದ್ದರಿಂದ ಹೆಣ್ಣುಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಚೆನ್ನಾಗಿ ಓದಿ ಸ್ವತಂತ್ರರಾಗಿ ಸ್ವಾವಲಂಬಿಗಳಾಗಬೇಕು. ಪ್ರಸ್ತುತ ಸಮಾಜದಲ್ಲಿ ರಾಜಕಾರಣ ಕಲುಷಿತವಾಗಿದೆ. ಈ ಸಮಾಜವನ್ನು ಶುದ್ಧೀಕರಣ ಮಾಡಬೇಕಾದರೆ ಪತ್ರಿಕೋದ್ಯಮ ಓದಿ, ವಕೀಲರಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು. ವಿದ್ಯಾರ್ಥಿಗಳು ಶಿಕ್ಷಕರು ಹೇಳಿದಂತೆ ಕೇಳಬೇಕು. ಹಿರಿಯರನ್ನು ಗೌರವಿಸಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಭರತ್ ಮಂಜೇಗೌಡ, ಖಜಾಂಚಿ ಭಾರ್ಗವಿ, ಪ್ರಾಂಶುಪಾಲ ನಾಗೇಶ್, ಶಾರದಾ ಪ್ರಸಾದ್, ಬಸನ್ನಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net