

ಯಳಂದೂರು: ಸಮಾಜವನ್ನು ಸಮಾನತೆಯಿಂದ ಕಾಣುವುದು, ಎಲ್ಲರೂ ಸ್ವತಂತ್ರರಾಗಿರುವುದು, ಪರಸ್ಪರ ಗೌರವದಿಂದ ವರ್ತಿಸಿದರೆ ಅಂಬೇಡ್ಕರ್ ಯುಗವಾಗಲಿದೆ ಎಂದು ಸರ್ಕಾರಿ ಪಬ್ಲಿಕ್ ಶಾಲೆ ಉಪಪ್ರಾಂಶುಪಾಲ ನಂಜುಂಡಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ವಾದವನ್ನು ಇಡೀ ವಿಶ್ವವೇ ಒಪ್ಪಿದೆ. ಇವರ ವಾದ ಅನುಸರಿಸುವ ವ್ಯಕ್ತಿಗಳು ಅನ್ಯಾಯದ ವಿರುದ್ಧ ಹೋರಾಡುವ ಬದಲು, ಅನ್ಯಾಯ ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದಿದ್ದೇ ಆದಲ್ಲಿ ದೇಶದಲ್ಲಿ ಸಮ ಸಮಾಜ ನಿರ್ಮಾಣವಾಗಲಿದೆ. ಸಹೋದರತ್ವ, ಐಕ್ಯತೆ ಹಾಗೂ ಸಾರ್ವಭೌಮತ್ವವನ್ನು ಕಾಪಾಡುವ ಗುರಿಯನ್ನು ಇಟ್ಟುಕೊಳ್ಳಬೇಕು. ಅಂಬೇಡ್ಕರ್ ಜೀವನ ಚರಿತ್ರೆಯೇ ನಮಗೆ ಪಾಠವಾಗಬೇಕು ಎಂದು ಹೇಳಿದರು.
ತಹಸೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ್ ಮಾತನಾಡಿ, ದೇಶವನ್ನು ಕಟ್ಟುವುದರಲ್ಲಿ ಅಂಬೇಡ್ಕರ್ ಅಗ್ರಗಣ್ಯ ನಾಯಕರಾಗಿದ್ದಾರೆ. ನಮ್ಮ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ತೊಲಗಬೇಕಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ವಿವಿಧ ಇಲಾಖೆ ಅಧಿಕಾರಿಗಳು ಮಾಲಾರ್ಪಣೆ ಮಾಡಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.