ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ

15 01 2023_KLR_PAGE_2
Published on


ವಿಜಯವಾಣಿ ಸುದ್ದಿಜಾಲ
ಮುಳಬಾಗಿಲು

ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ ಆದರೆ, ನಿಯಂತ್ರಣದಲ್ಲಿಡುವುದು ಸಾಧ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಹೇಳಿದರು.
ಮುಳಬಾಗಿಲಿನ ಅಮರಜ್ಯೋತಿ ಸಮೂಹ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಸಂಕ್ರಾಂತಿ ನೃತ್ಯ ಸಿರಿ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಔಷಧ ಕಂಡುಹಿಡಿದು ಹತೋಟಿಯಲ್ಲಿಡಲಾಗಿದೆ. ಅದರೆ ಭ್ರಷ್ಟಾಚಾರ ಹತೋಟಿಯಲ್ಲಿಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನೈತಿಕ ಶಿಕ್ಷಣ ಅತಿಮುಖ್ಯ ಎಂದರು. ಜೈಲಿಗೆ ಹೋಗಿ ಬರುವ ವ್ಯಕ್ತಿಗಳನ್ನು ಹೂ ಮಾಲೆ, ಸೇಬಿನ ಹಾರ ಹಾಕಿ ವಿಜೃಂಭಣೆಯಿಂದ ಸ್ವಾಗತ ಮಾಡುವುದನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಇದು ಯಾವ ರೀತಿ ಸಂದೇಶ ನೀಡುತ್ತಿದೆ ಎಂಬುದನ್ನು ಅರಿಯುತ್ತಿಲ್ಲ ಎಂದು ಬೇಸರಿಸಿದರು.
ತೃಪ್ತಿ ಅತಿಮುಖ್ಯ: ಅಧಿಕಾರಸ್ಥರು ಮತ್ತು ಶ್ರೀಮಂತರಾಗುವುದು ತಪ್ಪಲ್ಲ. ಅದರೆ ಮತ್ತೊಬ್ಬರ ಶ್ರಮ ಮತ್ತು ಜೇಬಿಗೆ ಕೈಹಾಕಿ ಗಳಿಸುವುದು ಮಹಾತಪ್ಪು. ನಿಷ್ಠಾವಂತ ಸರ್ಕಾರಿ ಅಧಿಕಾರಿಗಳು ನೌಕರರ ಸಂಖ್ಯೆ ವಿರಳವಾಗುತ್ತಿರುವುದು ಅಪಾಯಕಾರಿ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡುವುದು ಒಂದಿರಲಿ ಕರ್ತವ್ಯದ ಮೇಲೆ ಇರುವ ವೈದ್ಯರು ಶವಪರೀಕ್ಷೆಗೂ ಹಣಕ್ಕಾಗಿ ಕಾಯುತ್ತಾರೆ. ಮಾನವೀಯತೆ ಎಂಬುದೇ ಮರೆಯಾಗುತ್ತಿದೆ ಎಂದರು. ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ ಮಾತನಾಡಿ, ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಓದಿದವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಈಗ ವಿದ್ಯಾಸಂಸ್ಥೆಗಳು ಉತ್ತಮ ಶಿಕ್ಷಣವನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದರು.
ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ವಿ.ಮಂಜುನಾಥ, ವಿದ್ಯಾಸಂಸ್ಥೆಯ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್, ಕಾರ್ಯದರ್ಶಿ ಅಶೋಕ್ ಕುಮಾರ್, ಬಿಇಒ ಕೆ.ಆರ್.ಗಂಗರಾಮಯ್ಯ, ಅಮರಜ್ಯೋತಿ ಕಾಲೇಜು ಪ್ರಾಂಶುಪಾಲ ಸತ್ಯಮ್ಮಯ್ಯ, ಪ್ರೌಢಶಾಲೆ ಪ್ರಾಂಶುಪಾಲ ವೈ.ಆರ್.ಚಂಗಾರೆಡ್ಡಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮುನಿನಾರಾಯಣಪ್ಪ, ವಕೀಲರಾದ ಶಂಕರ್, ರಾಮಲಿಂಗೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net