

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಅಡಿ ನೋಂದಣಿಯಲ್ಲಿ ಬೀದರ್ ಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿರುವುದು ಹರ್ಷದ ಸಂಗತಿ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ಈ ಸಾಲಿನ (2022-23) ನೋಂದಣಿಯಲ್ಲಿ ಡಿಸಿಸಿ ಬ್ಯಾಂಕ್ ಇಡೀ ದೇಶದಲ್ಲಿ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸರಿಸುಮಾರು 2.58 ಲಕ್ಷ ರೈತರಿದ್ದು, ಈ ಪೈಕಿ ಸರಿ ಸುಮಾರು 1.64 ಲಕ್ಷ ರೈತರು ಬ್ಯಾಂಕಿನೊಟ್ಟಿಗೆ ಅಧ್ಯರ್ಪಿತಗೊಂಡ 183 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ಸಾಲ ಪಡೆದಿರುತ್ತಾರೆ. ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 183 ಪಿಕೆಪಿಎಸ್ ಗಳಲ್ಲಿ ಷೇರುದಾರ ಸದಸ್ಯರಾಗಿ ಬೆಳೆಸಾಲ ಪಡೆದ ಸುಮಾರು 1.35ಲಕ್ಷ ರೈತರು ತಂತ್ರಾಂಶದಲ್ಲಿ ನೊಂದಾಯಿಸಿದ್ದಾರೆ. ಈ ಮುಂಗಾರು ಸಾಲಿನಲ್ಲಿ ರೈತರು ಬಿತ್ತನೆ ಮಾಡಿರುವ ಬೆಳೆಗಳ ಪೈಕಿ ಹಾಗೂ ಸರ್ಕಾರ ಬೆಳೆ ವಿಮೆಗೆ ಗುರುತಿಸಿರುವ ಬೆಳೆಗಳ ಕುರಿತು ತಿಳಿದುಕೊಂಡು ಪಿಕ್ ಪಿಎಸ್ ಗಳಲ್ಲಿ ಬೆಳೆ ವಿಮೆ ನೊಂದಣಿ ಮಾಡಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಸಾಲಗಾರ ರೈತರ ನೊಂದಣಿಯಲ್ಲಿ ಬೀದರ್ ಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನ ಕಾಯ್ದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ನಾಗಮಾರಪಳ್ಳಿ ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಲ್ಲಿ ಡಿಸಿಸಿ ಬ್ಯಾಂಕಿನ ಮೂಲಕ ಬೆಳೆ ವಿಮೆ ರೈತರ ಪಾಲಿನ ಪ್ರಿಮಿಯಂನ ಮೊತ್ತ ರೂ. 64.53 ಕೋಟಿಗಳಷ್ಟು ವಿಮಾ ಕಂಪನಿಗೆ ಪಾವತಿಸಿದ್ದು, ಆಯಾ ವಾರ್ಷಿಕ ಋತುಮಾನಗಳಲ್ಲಿ ಹೆಚ್ಚಿನ ಮಳೆಯಾಗಿ ಅಥವಾ ತೇವಾಂಶ ಕಡಿಮೆಯಾಗಿ ಸರಾಸರಿ ಬೆಳೆ ಇಳುವರಿ ಮಟ್ಟ ಕಡಿಮೆಯಾಗಿರುವದರಿಂದ ಕೆಲವು ಬೆಳೆ ನಷ್ಟದ ಪರಿಣಾಮ ಡಿಸಿಸಿ ಬ್ಯಾಂಕಿನ ರೈತರ ಖಾತೆಗಳಿಗೆ ಸುಮಾರು ರೂ. 376.02 ಕೋಟಿಗಳಷ್ಟು ಬೆಳೆ ವಿಮೆ ಮೊತ್ತ ನೇರವಾಗಿ ಬಂದಿದೆ ಎಂದು ತಿಳಿಸಿದ್ದಾರೆ.
ಬೆಳೆ ವಿಮೆ ಯೋಜನೆ ಕುರಿತು ರೈತರಲ್ಲಿ ಅರಿವು ಮೂಡಿಸುವಲ್ಲಿ ಜಿಲ್ಲೆಯ ಜನ ಪ್ರತಿನಿಧಿಗಳು, ಜಿಲ್ಲಾ ಆಡಳಿತ, ವಿಶೇಷವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ, ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿ ಶ್ರಮವೂ ಇದೆ ಎಂದು ತಿಳಿಸಿದ್ದಾರೆ.