

ಖಾನಾಪುರ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಶಿವಸ್ಮಾರಕ ಚೌಕದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಷಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ಶುಕ್ರವಾರ ಬೆಳಗ್ಗೆ ತಹಸೀಲ್ದಾರ್ ಕಾರ್ಯಾಲಯದ ಎದುರು ಬೆಳಗಾವಿ-ಗೋವಾ ಹೆದ್ದಾರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ಬಿಜೆಪಿಯವರು ಉದ್ದೇಶಪೂರ್ವಕವಾಗಿ ಸಂವಿಧಾನ ಮತ್ತು ಸಂವಿಧಾನ ರಚನಾಕಾರರನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಮಿತ್ ಷಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ ಮಾತನಾಡಿ, ಬಿಜೆಪಿ ದೇಶದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕತ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಹಸೀಲ್ದಾರ್ ಪ್ರಕಾಶ ಗಾಯಕವಾಡ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ರವಾನಿಸಲಾಯಿತು.
ಕೆಪಿಸಿಸಿ ಸದಸ್ಯ ಮಹಾದೇವ ಕೋಳಿ, ನಗರ ವಿಭಾಗದ ಅಧ್ಯಕ್ಷ ಮಹಾಂತೇಶ ರಾವುತ್, ಮಹಿಳಾ ವಿಭಾಗದ ಅಧ್ಯಕ್ಷೆ ಸಾವಿತ್ರಿ ಮಾದರ, ಮಹಿಳಾ ಗ್ರಾಮಾಂತರ ಅಧ್ಯಕ್ಷೆ ದೀಪಾ ಪಾಟೀಲ, ಮಾಜಿ ಅಧ್ಯಕ್ಷೆ ಅನಿತಾ ದಂಡಗಲ್, ಗೌಸಲಾಲ್ ಪಟೇಲ್, ಯಶವಂತ ಬಿರ್ಜೆ, ಸುರೇಶ ಜಾಧವ, ಚಂಬಣ್ಣ ಹೊಸಮನಿ, ಪ್ರಸಾದ ಪಾಟೀಲ, ಜಾಕಿ ನಾರ್ಂಡಿಸ್, ದೇಮಣ್ಣ ಬಸರಿಕಟ್ಟಿ, ವೈಷ್ಣವಿ ಪಾಟೀಲ ಇತರರಿದ್ದರು.
ಮೋದಿ ಸಂಪುಟದಿಂದ ಅಮಿತ್ ಷಾಗೆ ಕೈಬಿಡಲಿ: ಮೂಡಲಗಿ: ಕೇಂದ್ರ ಗಹ ಸಚಿವ ಅಮಿತ್ ಷಾ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶಿವಾನಂದ ಬಬಲಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದವು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ ಮಾತನಾಡಿ, ಗಹ ಸಚಿವ ಅಮಿತ್ ಷಾ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡಿದ್ದು, ದೇಶಕ್ಕೆ ಮಾಡಿದ ಅಪಮಾನವಾಗಿದೆ. ದೇಶ ಮತ್ತು ಜಗತ್ತೇ ಮೆಚ್ಚುವ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿರುವುದು ಖಂಡನೀಯ. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದೇಶದ ಜನತೆಗೆ ಕ್ಷಮೆ ಕೇಳಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ದೇಶಾದ್ಯಂತ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಬು ಸಣ್ಣಕ್ಕಿ, ಯಶವಂತ ಮಂಟೂರ, ಅಶೋಕ ಸಣ್ಣಕ್ಕಿ, ಪ್ರಭಾಕರ ಮಂಟೂರ, ವಿಲ್ಸನ್ ಢವಳೇಶ್ವರ, ರವಿ ಮೂಡಲಗಿ, ತೇನಸಿಂಗ ಸಣ್ಣಕ್ಕಿ, ಸುರೇಶ ಸಣ್ಣಕ್ಕಿ, ಈರಪ್ಪ ಢವಳೇಶ್ವರ, ಶ್ರೀಧರ ಹವಳೆವ್ವಗೋಳ ಇತರರು ಇದ್ದರು.