

ವಿಜಯವಾಣಿ ಸುದ್ದಿಜಾಲ ವಿಜಯಪುರ
ಇಂದಿರಾಗಾಂಧಿ, ಮನಮೋಹನ್ ಸಿಂಗ್ ಸೇರಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಕ್ಕ ಪಕ್ಕ ದೇಶಗಳಿಂದ ಭಾರತದ ಮೇಲೆ ದಾಳಿ ನಡೆಯುತ್ತಿರಲಿಲ್ಲ, ಆದರೆ ಈಗ ಪಾಕಿಸ್ತಾನ ಹಾಗೂ ಚೀನಾ ನಿರಂತರ ದಾಳಿ ನಡೆಸುತ್ತಿದ್ದು, ಭಾರತದಲ್ಲಿ ಅಭದ್ರತೆ ಸೃಷ್ಟಿಯಾಗಿದೆ ಎಂದು ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ನಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನಮ್ಮ ಅವಧಿಯಲ್ಲಿ ಎತ್ತಿನಹೊಳೆ ಯೋಜನೆ ರೂಪಿಸಲಾಗಿತ್ತು. ಕೊನೆಯ ಹಂತದ ಕಾಮಗಾರಿಗೆ 3000 ಕೋಟಿ ರೂ. ವೆಚ್ಚ ಮಾಡಿದ್ದರೆ ಯೋಜನೆ ಸಂಪೂರ್ಣವಾಗಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಭಾಗಗಳಿಗೆ ನೀರು ದೊರಕುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಹಣ ನೀಡಿಲ್ಲ ಎಂದು ದೂರಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಮಾತನಾಡಿ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ನಾಲ್ಕು ತಿಂಗಳು ಮಾತ್ರ ಉಳಿದಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ಸಾಮಾಜಿಕ ಜಾಲತಾಣ ಬಳಸಿಕೊಂಡು ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಹಳೆಯ ಕಾಂಗ್ರೆಸ್ ಸದಸ್ಯರನ್ನು ಮತ್ತೆ ಪಕ್ಷಕ್ಕೆ ಕರೆತರುವ ಮೂಲಕ ಪಕ್ಷ ಬಲಪಡಿಸಬೇಕು.
ಕಾಂಗ್ರೆಸ್ ಎಸ್‌ಸಿ ಘಟಕದ ಮಾಜಿ ಜಿಲ್ಲಾಧ್ಯಕ್ಷ ಚಿನ್ನಪ್ಪ ಮಾತನಾಡಿ, ಕ್ಷೇತ್ರದಲ್ಲಿ ಈಗಾಗಲೇ ಪಕ್ಷದ ಕಾರ್ಯಕರ್ತರು ಸಾಕಷ್ಟು ನೊಂದಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದರು. ಮುಖಂಡರಾದ ಶಾಂತಕುಮಾರ್, ಲೋಕೇಶ್, ದೇವನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಚಂದೇನಹಳ್ಳಿ ಮುನಿಯಪ್ಪ, ದೇವನಹಳ್ಳಿ ತಾಪಂ ಮಾಜಿ ಅಧ್ಯಕ್ಷ ಮುದುಗುರ್ಕಿ ನಾರಾಯಣಸ್ವಾಮಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ರವಿ, ಮಾಜಿ ಮೇಯರ್ ಪದ್ಮಾವತಮ್ಮ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಎಸ್.ಪಿ. ಮುನಿರಾಜು, ಮಾಜಿ ಅಧ್ಯಕ್ಷ ಜಗನ್ನಾಥ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಬಿ. ರಾಜಣ್ಣ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜು, ಕಾರ್ಯದರ್ಶಿ ನಟರಾಜ್, ಯುವ ಘಟಕದ ಜಿಲ್ಲಾಧ್ಯಕ್ಷ ನಾಗೇಶ್, ವಿಜಯಪುರ ಪುರಸಭೆ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್, ಜಿಪಂ ಮಾಜಿ ಸದಸ್ಯ ಬಾಲೇಪುರ ಲಕ್ಷ್ಮೀನಾರಾಯಣಪ್ಪ ಇದ್ದರು.