

ಮೈಸೂರು; ಅಂಗಾಂಗ ಕಸಿ ಮಾಡಲು ಅಂಗದಾನದ ಕೊರತೆ ಭಾರತದಲ್ಲಿ ಅತಿ ಹೆಚ್ಚಾಗಿ ಕಾಡುತ್ತಿದೆ ಎಂದು ಮೈಸೂರು ಅಪೋಲೊ ಬಿಜಿಎಸ್ ಆಸ್ಪತ್ರೆಯ ಹೆಪಾಟೊ ಬೈಲರಿ ಮತ್ತು ಲಿವರ್ ಕಸಿ ಶಸ್ತ್ರಚಿಕಿತ್ಸಕ ಡಾ.ವಿ.ಯಶವಂತ್‌ಕುಮಾರ್ ಹೇಳಿದರು.
ವಿಶ್ವ ಅಂಗದಾನ ದಿನದ ಅಂಗವಾಗಿ ಅಪೋಲೊ ಬಿಜಿಎಸ್ ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಂಗಾಂಗ ದಾನದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಅಂದಾಜಿನ ಪ್ರಕಾರ ಲಕ್ಷಾಂತರ ಜನರು ಅಂಗ ವೈಫಲ್ಯದಿಂದ ಬಳಲುತ್ತಿದ್ದು, ವಾರ್ಷಿಕ ಕೇವಲ 3,500ರಷ್ಟು ಅಂಗಾಂಗ ಕಸಿ ನಡೆಯುತ್ತಿವೆ. ನಿತ್ಯ ಕನಿಷ್ಠ 15 ರೋಗಿಗಳು ಅಂಗದಾನದ ನಿರೀಕ್ಷೆಯಲ್ಲೇ ಮೃತಪಡುತ್ತಿದ್ದು, ಅಂಗದಾನದ ನಿರೀಕ್ಷೆಯ ಪಟ್ಟಿಗೆ ಪ್ರತಿ 10 ನಿಮಿಷಕ್ಕೆ ಹೊಸ ಹೆಸರು ಸೇರ್ಪಡೆಯಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಅಂಗದಾನದ ಕುರಿತು ಅರಿವು ಮೂಡಿಸುವುದೊಂದೇ ದಾರಿ ಎಂದರು.
ಮೈಸೂರು ಅಪೋಲೊ ಬಿಜಿಎಸ್ ಆಸ್ಪತ್ರೆಯ ಮುಖ್ಯ ಗ್ಯಾಸ್ಟ್ರೋ ಎಂಟರಾಲಜಿಸ್ಟ್, ಗ್ಯಾಸ್ಟ್ರೋ ಎಂಟರಾಲಜಿ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಡಾ.ರಾಜ್‌ಕುಮಾರ್ ಪಿ.ವಾಧ್ವಾ ಮಾತನಾಡಿ, ಪ್ರಸ್ತುತ ಭಾರತದಲ್ಲಿ 1 ಲಕ್ಷ ಜನರಿಗೆ ಅಂಗಾಂಗಗಳ ಅಗತ್ಯವಿದೆ. ಅಲ್ಲದೆ, ಅಂಗದಾನಿಗಳ ನಿರೀಕ್ಷೆಯಲ್ಲೇ 1,000 ಜನರು ಮೃತಪಡುತ್ತಿದ್ದಾರೆ. ದಾನಿಗಳ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದರು.
ಮೈಸೂರು ಅಪೋಲೊ ಬಿಜಿಎಸ್ ಆಸ್ಪತ್ರೆಯ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಡಾ.ಶ್ರೀನಿವಾಸ್ ನಲ್ಲೂರ್ ಮಾತನಾಡಿ, ಒಬ್ಬ ದಾನಿಯು ಕನಿಷ್ಠ ಎಂಟು ಜನರಿಗೆ ಜೀವದಾನ ಮಾಡಬಹುದು. ಆದರೆ ಅಂಗದಾನ ಹಾಗೂ ಅಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳ ಸಂಖ್ಯೆಯ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದರು.
ಮೈಸೂರು ಅಪೋಲೊ ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷ ಹಾಗೂ ಯೂನಿಟ್ ಹೆಡ್ ಎನ್.ಜಿ.ಭರತೀಶ ರೆಡ್ಡಿ ಮಾತನಾಡಿ, ನಮ್ಮ ಆಸ್ಪತ್ರೆ ಮೈಸೂರು ಪ್ರದೇಶದ ಬಹು ಅಂಗಾಂಗ ಕಸಿ ಕೇಂದ್ರವಾಗಿದೆ. ಆಸ್ಪತ್ರೆಯಲ್ಲಿ ಹಲವು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಕೈಗೊಂಡಿದೆ ಎಂದರು.
ಬೆಂಗಳೂರಿನ ಅಪೋಲೊ ಆಸ್ಪತ್ರೆಯ ಎಚ್‌ಪಿಬಿ ಮತ್ತು ಬಹು-ಅಂಗಾಂಗ ಕಸಿ ಶಸ್ತ್ರಚಿಕಿತ್ಸಕ ಡಾ.ಸುರೇಶ್ ರಾಘವಯ್ಯ ಮಾತನಾಡಿ, ಅಂಗದಾನ ಕ್ರಿಯೆ ಜನಾಂಗ, ಧರ್ಮ ಮತ್ತು ರಾಷ್ಟ್ರೀಯತೆಯ ಆಚೆಗೂ ಜನರನ್ನು ಒಂದುಗೂಡಿಸುತ್ತದೆ ಎಂದರು.
ಮಿದುಳು ನಿಷ್ಕ್ರಿಯವಾದ ಬಳಿಕ ಅಂಗದಾನ ಮಾಡಿದ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು. ಸಿಎಸ್‌ಐ, ಕೆಎಸ್‌ಡಿಯ ಬಿಷಪ್ ರೆವೆರೆಂಡ್ ಹೇಮಚಂದ್ರಕುಮಾರ್, ಅಲ್ ಅನ್ಸಾರ್ ಆಸ್ಪತ್ರೆಯ ಮಕ್ಕಳ ತಜ್ಞ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ಡಾ.ಇಫ್ತೆಕರ್ ಅಹಮದ್ ನಜೀರ್, ಬೌದ್ಧ ಧರ್ಮದ ಧಾರ್ಮಿಕ ಮುಖಂಡರಾದ ಸೇರಾ ಮೇಖೆನ್ರಿನ್ಪೋಚೆನ್, ದಿನೇಶ್ ಗುರೂಜಿ, ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಆರ್. ಬೆಳವಾಡಿ ಇನ್ನಿತರರಿದ್ದರು.