

ಚನ್ನರಾಯಪಟ್ಟಣ: ದೇಶದ ಸುಸ್ಥಿತಿಗಾಗಿ ಪ್ರತಿಯೊಬ್ಬರು ಮತದಾನ ಮಾಡುವುದು ಅಗತ್ಯ ಎಂದು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ತಾಲೂಕು ಪಂಚಾಯಿತಿ, ಲಯನ್ಸ್ ಕ್ಲಬ್ ಹಾಗೂ ಸ್ವೀಪ್ ಕಮಿಟಿ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಮತದಾನ ಹಕ್ಕು, ಪುರುಷ ಸಂತಾನಹರಣಾ ಶಸ್ತ್ರಚಿಕಿತ್ಸೆ ಮತ್ತು ಮೆದುಳು ಜ್ವರದ ಕುರಿತ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನ ಮಾಡುವ ಸಲುವಾಗಿ ನೊಂದಣಿ ಮಾಡಿಕೊಂಡು ಮತದಾರರ ಗುರುತಿನ ಚೀಟಿ ಪಡೆಯಬೇಕು. ಮಹಿಳಾ ಸಂತಾನಹರಣ ಚಿಕಿತ್ಸೆಗಿಂತಲೂ ಹೆಚ್ಚು ಸುರಕ್ಷಿತವಾದದ್ದು ಪುರುಷ ಸಂತಾನಹರಣ ಚಿಕಿತ್ಸಾ ವಿಧಾನವಾಗಿದೆ ಎಂದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ವೀಣಾ ಮಾತನಾಡಿ, ಮತದಾನ ಪ್ರತಿಯೊಬ್ಬರಿಗೂ ಇರುವ ಸಂವಿಧಾನಿಕ ಹಕ್ಕು. 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ, ಯುವತಿಯರು ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಬೇಕು. ಇಲ್ಲವೇ ವಿಎಚ್‌ಪಿ ಆ್ಯಪ್ ಮೂಲಕ ನೊಂದಾವಣಿ ಮಾಡಿಕೊಳ್ಳಬಹುದು ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಮೆದುಳು ಜ್ವರ ರಾಜ್ಯದ ಇತರೆಡೆ ಹರಡುವ ಲಕ್ಷಣ ಕಂಡುಬಂದಿರುವ ಹಿನ್ನಲೆಯಲ್ಲಿ 1 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಡಿ.5 ರಿಂದ ಡಿ.24 ರವರೆಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಜಾಥಾ ಕೈಗೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅರಿವು ಮೂಡಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ರವಿ, ಆರೋಗ್ಯಾಧಿಕಾರಿ ಪುಷ್ಪಾವತಿ, ಹಿರಿಯ ಆರೋಗ್ಯ ಸರಂಕ್ಷಣಾದೀಕಾರಿ ವಿಶಾಲಾಕ್ಷಿ, ಹಿರಿಯ ಆರೋಗ್ಯ ನಿರೀಕ್ಷಕ ಶಿವಲಿಂಗಯ್ಯ ಹಾಗೂ ಇತರರು ಇದ್ದರು.