

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಸುಸ್ಥಿರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಾಕ್ಷರತೆ ಹೊಂದುವುದು ಅತ್ಯಗತ್ಯ ಎಂದು ರಾಜ್ಯ ಸಾಕ್ಷರತಾ ಸಂಪನ್ಮೂಲ ವ್ಯಕ್ತಿ ವೀರಣ್ಣ ಒಡ್ಡೀನ ಹೇಳಿದರು.
ತಾಲೂಕಿನ ಕರಡಿಗುಡ್ಡ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಶ್ವ ಸಾಕ್ಷರತಾ ದಿನ ಸಮಾರಂಭದಲ್ಲಿ ಸಾಕ್ಷರತೆ ದೇಶದ ಅಭಿವೃದ್ಧಿಯ ಬೆನ್ನೆಲುಬು ಎಂಬ ಕುರಿತು ಉಪನ್ಯಾಸ ನೀಡಿದರು.
ವಿದ್ಯೆಯಿಲ್ಲದ ವ್ಯಕ್ತಿ ಸಮರ್ಥ ನಾಗರಿಕನಾಗಲಾರ. ಸಾಕ್ಷರತೆ ಮಾನವ ಹಕ್ಕುಗಳಲ್ಲಿ ಒಂದಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಡತನ, ಅಜ್ಞಾನ, ಮೂಢನಂಬಿಕೆ, ಶೋಷಣೆ ತಪ್ಪಿಸುವುದೇ ಸಾಕ್ಷರತೆ ಉದ್ದೇಶ ಎಂದರು.
ಸಿ.ವೈ. ಲಗಮಣ್ಣವರ ಮಾತನಾಡಿ, ದೇಶದ ಜನರ ಜೀವನಮಟ್ಟ ಸುಧಾರಿಸಲು ಪ್ರತಿಯೊಬ್ಬ ನಾಗರಿಕ ಸಾಕ್ಷರತೆ ಹೊಂದುವುದು ಮುಖ್ಯ. ಓದುವ, ಬರೆಯುವ ಮತ್ತು ಅದನ್ನು ಗ್ರಹಿಸಿ ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯವನ್ನು ಸಾಕ್ಷರತೆ ಎಂದು ಪರಿಗಣಿಸಲಾಗುತ್ತದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷರತೆ ಪ್ರಮುಖ ಆಧಾರ ಸ್ತಂಭ ಎಂದರು.
ನಂದೀಶ ಕಾಖಂಡಕಿ ಅಧ್ಯಕ್ಷತೆ ವಹಿಸಿದ್ದರು. ಅಮ್ಮಿನಬಾವಿ ಸಿಆರ್‌ಪಿ ಬಸವರಾಜ ಕುರಗುಂದ, ಉಪನ್ಯಾಸಕರಾದ ಪ್ರಕಾಶ ಸುಣಗಾರ, ಪುಷ್ಪಾ ಐರಸಂಗ, ವಿದ್ಯಾರ್ಥಿಗಳು, ಇತರರು ಇದ್ದರು.
ಪಿ.ಎಲ್.ಸೋಜಾ ಸ್ವಾಗತಿಸಿದರು. ಮಾರುತಿ ನಿರೂಪಿಸಿದರು. ಸಿ.ಬಿ.ಶೀಲವಂತರ ವಂದಿಸಿದರು.