

ಹಾಸನ: ಭಾರತದ ಸ್ವಾತಂತ್ರೃ ಹೋರಾಟ ಮತ್ತು ಸ್ವಾತಂತ್ರಾೃನಂತರ ದೇಶದ ಸಂವಿಧಾನ ರಚನೆಯಲ್ಲಿ ವಕೀಲರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದರು.
ನಗರದ ನೂತನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ಶನಿವಾರ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರೃ ಹೋರಾಟದ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧೀಜಿ ವಕೀಲರಾಗಿದ್ದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಕೀಲರಾಗಿ ಸೇವೆ ಸಲ್ಲಿಸಿದ್ದವರು. ಸಂವಿಧಾನ ರಚನೆ ಕರಡು ಸಮಿತಿಯಲ್ಲಿದ್ದ 389 ಸದಸ್ಯರಲ್ಲಿ ಬಹುತೇಕ ಮಂದಿ ವಕೀಲರಾಗಿದ್ದರು ಎಂದು ತಿಳಿಸಿದರು.
ಭಾರತದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಸಹ ವಕೀಲರಾಗಿ ಹೆಸರು ಮಾಡಿದ್ದವರು. ಅವರ ಜನ್ಮ ದಿನವನ್ನು ಪ್ರತಿವರ್ಷ ವಕೀಲರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರೃ ಹೋರಾಟದಲ್ಲಿ ಮತ್ತು ಸಂವಿಧಾನ ರಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವಕೀಲರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಸ್ವಾತಂತ್ರೃಪೂರ್ವದಿಂದಲೂ ವಕೀಲರು ಶೋಷಿತರ ಪರವಾಗಿ ನಿಂತು ತಮ್ಮ ವೃತ್ತಿಪರತೆ ಮೆರೆದಿದ್ದಾರೆ. ಆ ಪರಂಪರೆಯನ್ನು ಇಂದಿನ ವಕೀಲರು ಮುಂದುವರಿಸಿಕೊಂಡು ಹೋಗಬೇಕು. ನೊಂದವರಿಗೆ ನ್ಯಾಯ ಕೊಡಿಸುವ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಮಾತನಾಡಿ, ವಕೀಲರು ತಮ್ಮ ವೃತ್ತಿಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು. ಪ್ರಸಕ್ತ ದಿನಗಳಲ್ಲಿ ಕೆಲ ವಕೀಲರು ವೃತ್ತಿಪರತೆ ಮರೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಎಚ್ಚರಿಸಿದರು.
ಆದಷ್ಟು ಬೇಗ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡಲು ವಕೀಲರು ಸಹಕರಿಸಬೇಕು. ಪ್ರಕರಣದ ಇತ್ಯರ್ಥ ತಡವಾದಷ್ಟೂ ನ್ಯಾಯದಾನ ವಿಳಂಬವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸದ್ದಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಪೂರ್ಣಚಂದ್ರ ತೇಜಸ್ವಿ, ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ಸಂಕಷ್ಟದಲ್ಲಿದ್ದ ವಕೀಲರ ನೆರವಿಗೆ ಸಂಘ ಪ್ರಾಮಾಣಿಕವಾಗಿ ಸ್ಪಂದಿಸಿದೆ. ವಕೀಲರಿಗೆ ವೃತ್ತಿ ಭದ್ರತೆ ಒದಗಿಸಲು ರಾಜ್ಯ ವಕೀಲರ ಸಂಘ ಪ್ರಯತ್ನ ನಡೆಸಬೇಕು ಎಂದು ಮನವಿ ಮಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಲ್. ವಿಜಯಲಕ್ಷ್ಮೀದೇವಿ, ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್, ಬಿ.ಎಲ್. ಲಲಿತಾ, ಮತ್ತು ಬಿ. ಚಂದ್ರಶೇಖರ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಜಿ. ರಂಗಸ್ವಾಮಿ, ಉಪಾಧ್ಯಕ್ಷ ಎಸ್.ಬಿ. ಮಂಜುನಾಥ್, ಜಿಲ್ಲಾ ಕಸಾಪ ಅಧ್ಯಕ ಡಾ. ಎಚ್.ಎಲ್. ಮಲ್ಲೇಶಗೌಡ, ಸಾಹಿತಿ ಲಲಿತಾ ಶೇಷಾದ್ರಿ , ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಂ.ಎನ್. ಮಧುಸೂದನ್ ಇತರರು ಹಾಜರಿದ್ದರು.