

ಚಿತ್ರದುರ್ಗ: ದೇಶದ ಸಂವಿಧಾನ ಬದಲಾವಣೆ ಅಸಾಧ್ಯ. ಅದರ ಅಡಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡು ನಾವೆಲ್ಲ ಚುನಾಯಿತರಾಗಿದ್ದೇವೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ತಿಳಿಸಿದರು.
ತರಾಸು ರಂಗಮಂದಿರದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್-ಚಿತ್ರದುರ್ಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಬದಲಾಯಿಸಿದ್ದು ಯಾರು? ಎಂಬ ಪುಸ್ತಕ ಬಿಡುಗಡೆ, ಸಂವಿಧಾನ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುರ್ಚಿ ರಕ್ಷಣೆ, ಸ್ವಂತ ಲಾಭಕ್ಕಾಗಿ ಸಂವಿಧಾನ ತಿದ್ದುಪಡಿ ತಂದಿದ್ದೆ ಕಾಂಗ್ರೆಸ್. ಆದರೆ, ಬದಲಿಸಲಿಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯೆಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಅಪ ಪ್ರಚಾರದಲ್ಲಿ ತೊಡಗಿದೆ ಎಂದು ವಾಗ್ದಾಳಿ ನಡೆಸಿದರು.
ಪವಿತ್ರ ಗ್ರಂಥ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದರಿಂದ ಅನೇಕ ಜಾತಿ, ಧರ್ಮ, ಆಚಾರ, ವಿಚಾರ, ವೈವಿಧ್ಯತೆಯಿಂದ ಕೂಡಿರುವ ಭಾರತದಲ್ಲಿ ಪ್ರತಿಯೊಬ್ಬರಿಗೂ ರಕ್ಷಣೆ ಸಿಕ್ಕಿದೆ. 1951ರಲ್ಲಿ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಮೊದಲ ಬಾರಿ, 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಅಂದಿನ ಪ್ರಧಾನಿ ಇಂದಿರಾಗಾಂಧಿ ಸಂವಿಧಾನ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡರು ಎಂದು ಕಿಡಿಕಾರಿದರು.
ಆರ್ಟಿಕಲ್ 368ರ ಪ್ರಕಾರ ಸಂವಿಧಾನ ತಿದ್ದುಪಡಿಗೆ ಅವಕಾಶವಿದೆ. ಇದನ್ನು ಕಾಂಗ್ರೆಸ್ಸಿಗರು ಅಧಿಕಾರ ಉಳಿಸಿಕೊಳ್ಳಲು ಬಳಸಿಕೊಂಡರು. ಎಲ್ಲ ಸಂದರ್ಭಗಳಲ್ಲೂ ಸಂವಿಧಾನ ದುರುಪಯೋಗ ಪಡಿಸಿಕೊಂಡಿದ್ದಾರೆ. ಆದರೆ, ಅಟಲ್ ಬಿಹಾರಿ ವಾಜಪೇಯಿ, ಈಗಿನ ಪ್ರಧಾನಿ ನರೇಂದ್ರಮೋದಿ ತಿದ್ದುಪಡಿ ಮಾಡಿರುವುದು ಪ್ರಜೆಗಳ ಒಳಿತಿಗಾಗಿಯೇ ವಿನಃ ಅಧಿಕಾರಕ್ಕಾಗಿ ಅಲ್ಲ ಎಂದರು.
1918ರಲ್ಲಿ ಮೈಸೂರು ಮಹಾರಾಜರು ಮೊದಲು ಮೀಸಲಾತಿ ಕುರಿತು ಚರ್ಚಿಸಿ ಮಿಲ್ಲರ್ ಆಯೋಗ ರಚಿಸಿದ ನಂತರ ಬಂದ ವರದಿ ಆಧಾರದ ಮೇಲೆ ಜಾರಿಗೊಳಿಸಿದರು. ಸಂವಿಧಾನ ರಚನೆ ವೇಳೆ ಅಂಬೇಡ್ಕರ್ ಇದನ್ನು ಅನುಸರಿಸಿದರು. ಹೀಗಾಗಿ ಸಂವಿಧಾನ ಮೈಸೂರು ಅದರಲ್ಲೂ ಕರ್ನಾಟಕದ ಆಸ್ತಿ ಎಂದರು.
2014ರಲ್ಲಿ ಅಸಮತೋಲನ ಆರ್ಥಿಕ ಪರಿಸ್ಥಿತಿ ಇತ್ತು. ಆದರೀಗ ವಿಶ್ವದಲ್ಲೇ ಭಾರತ ಐದನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಮೂರನೇ ಸ್ಥಾನಕ್ಕೆ ಏರಲಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ಕನಸಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಚಿತ್ರದುರ್ಗ-ಮೈಸೂರು ನಡುವಿನ ಅವಿನಾಭಾವ ಸಂಬಂಧ ಹೀಗೆ ಮುಂದುವರಿಯಲಿದೆ ಎಂದು ತಿಳಿಸಿದರು.
ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಡಾ.ಬಾಬಾ ಸಾಹೇಬರೆ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯವೆಂದು ಮೋದಿ ಹೇಳುವ ಮೂಲಕ ಕಾಂಗ್ರೆಸ್ ಅಪ ಪ್ರಚಾರಕ್ಕೆ ಈಗಾಗಲೇ ತಕ್ಕ ಉತ್ತರ ನೀಡಿದ್ದಾರೆ ಎಂದರು.
ಈವರೆಗೂ 106 ಬಾರಿ ಸಂವಿಧಾನ ತಿದ್ದುಪಡಿಯಾಗಿದೆ. ಕಾಂಗ್ರೆಸ್ ಅವಧಿಯಲ್ಲೇ 75 ಬಾರಿಯಾಗಿದೆ. ಇಂದಿರಾಗಾಂಧಿ ಅವಧಿಯಲ್ಲೇ 32 ಸಲ ತಿದ್ದುಪಡಿಯಾಗಿದೆ. ತುರ್ತು ಪರಿಸ್ಥಿತಿ ಏರಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದು, ಕುರ್ಚಿಗಾಗಿ ನ್ಯಾಯಾಂಗದ ಅಧಿಕಾರವನ್ನೇ ಕಸಿದುಕೊಂಡಿದ್ದನ್ನು ಮರೆಮಾಚಲು ಸಾಧ್ಯವಿಲ್ಲ. ಈ ಮೂಲಕ ಕಾಂಗ್ರೆಸ್ಸಿಗರಿಂದ ಸಂವಿಧಾನ, ಅಂಬೇಡ್ಕರ್ ಅವರಿಗೆ ಸಾಕಷ್ಟು ಅವಮಾನವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪುಸ್ತಕದ ಲೇಖಕ ಪಿ.ವಿಕಾಸ್‌ಕುಮಾರ್, ಜಿ.ಎಚ್. ಮೋಹನ್‌ಕುಮಾರ್ ಇತರರಿದ್ದರು.