ದೇಶದ ಸಂಪತ್ತುವಿದೇಶಿಗರ ಕೈಗೆ ಕೊಡಲು ಮುಂದಾದ ಮೋದಿ

7 ckm 1
ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಸಿಪಿಐ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬಹಿರಂಗ ಅಧಿವೇಶನದಲ್ಲಿ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್‌ ಪಕ್ಷದ ಬಾವುಟ ಬೀಸುವ ಮೂಲಕ ಅಧಿವೇಶನಕ್ಕೆ ಚಾಲನೆ ನೀಡಿದರು.
Published on

ಚಿಕ್ಕಮಗಳೂರು: ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಚಲೇ ಜಾವ್ ಚಳವಳಿ ನಡೆಸಲಾಗಿತ್ತು. ಆದರೆ ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಚಲೇ ಆವ್ ನ್ನುವ ಮೂಲಕ ದೇಶದ ಸಂಪತ್ತನ್ನು ಮತ್ತೆ ವಿದೇಶಿಗರ ಕೈಗೆ ಕೊಡಲು ಮುಂದಾಗಿದ್ದಾರೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಸಿದ್ದನಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಸಿಪಿಐ ಶತಮಾನೋತ್ಸವದ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಬಹಿರಂಗ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಇದೀಗ ಮತ್ತೆ ವಾಪಸ್ ವಿದೇಶಿ ಕಂಪನಿಗಳನ್ನು ಕರೆತರುತ್ತಿದ್ದಾರೆ. ಜೊತೆಗೆ ದೇಶದ ಭೂಮಿ ಹಾಗೂ ನೀರನ್ನು ಅವರಿಗೆ ನೀಡುವ ಮೂಲಕ ಮತ್ತೆ ದೇಶದ ಜನರ ಸ್ವತಂತ್ರ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಅಂಬಾನಿ, ಅಧಾನಿಗೆ ನೀಡಿರುವ ಸಾಲ ಮನ್ನಾ ಮಾಡುತ್ತಿದ್ದಾರೆ. ಆದರೆ ಹೂವು ಹಣ್ಣು ಮಾರುವ ಸಣ್ಣಪುಟ್ಟ ವರ್ತಕರಿಗೆ ಜಿಎಸ್‌ಟಿ ಹಾಕುತ್ತಿದ್ದಾರೆ. ಇದರಿಂದ ಮೋದಿ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ. ಜೊತೆಗೆ ಸಾಮಾನ್ಯ ಜನರ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಭೂಮಿಯನ್ನು ಬಂಡವಾಳಶಾಹಿಗಳು ಖರೀದಿ ಮಾಡಲು ಅನುಕೂಲ ಮಾಡಿಕೊಟ್ಟರು. ಇದನ್ನು ವಾಪಸ್ ಪಡೆಯುವಂತೆ ಇಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಮನವಿ ಮಾಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್ ಸಹ ಬಡವರ ವಿರುದ್ಧವಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಕಾರ್ಮಿಕರು ಹಾಗೂ ರೈತರು ಬೆವರು ಸುರಿಸಿ ದುಡಿದ ಶೇ. 60ರಷ್ಟು ಸಂಪತ್ತು ದೇಶದಲ್ಲಿರುವ ಶೇ. 1ರಷ್ಟು ಶ್ರೀಮಂತರ ಬಳಿ ಇದೆ. ಇದರಿಂದಾಗಿ ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ. ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ದೇಶದಲ್ಲಿ ಸೃಷ್ಟಿಯಾಗುವ ಸಂಪತ್ತು ಸಮಾನವಾಗಿ ಹಂಚಿಕೆಯಾಗುವಂಥ ಆರ್ಥಿಕ ನೀತಿ ರಚನೆಯಾಗಬೇಕು. ಈ ಬಗ್ಗೆ ದೇಶದ ಕಾರ್ಮಿಕರು, ರೈತರು ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.

ಆರ್ ಎಸ್ ಎಸ್ ಹಾಗೂ ಬಿಜೆಪಿ ಸೇರಿಕೊಂಡು ಧರ್ಮ ಆಧಾರಿತ ರಾಜಕಾರಣದ ಹಿನ್ನೆಲೆಯಲ್ಲಿ ಶ್ರೇಣಿಕೃತ ಸಮಾಜ ನಿರ್ಮಾಣಕ್ಕೆ ಮುಂದಾಗಿವೆ. ಆದರೆ ಸಿಪಿಐ ಮಾತ್ರ ಜಾತಿ ಇಲ್ಲದ, ಎಲ್ಲಾ ಪ್ರಜೆಗಳು ಸಮಾನವಾಗಿರುವ ಸಮಾಜ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸುತ್ತಿದೆ ಎಂದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಮೂಲಕ ಜನರಿಗೆ ಕೆಲ ಅನುಕೂಲ ಮಾಡಿಕೊಟ್ಟಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುವ ಮೊದಲು ಕೃಷಿ ಕಾಯ್ದೆಗೆ ತಿದ್ದುಪಡಿ ತರುತ್ತೇವೆ ಎಂದಿದ್ದರು. ಆದರೆ ಇದುವರೆಗೆ ಆ ಕೆಲಸವನ್ನು ಮಾಡಿಲ್ಲ. ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಯಿಂದ ಎಂಟು ಗಂಟೆಗೆ ಇಳಿಸುವುದಾಗಿ ಹೇಳಿದ್ದರು. ಅದರ ಬಗ್ಗೆಯೂ ಇದೀಗ ಪ್ರಸ್ತಾಪವನ್ನೇ ಮಾಡುತ್ತಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಏನು ಮಾಡುತ್ತಿದೆಯೋ ಅದೇ ಜನ ವಿರೋಧಿ ನೀತಿಯನ್ನು ರಾಜ್ಯ ಸರ್ಕಾರವು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್‌.ಎಲ್. ರಾಧಾ ಸುಂದರೇಶ್ ವಹಿಸಿದ್ದರು. ಸಿ ಪಿ ಐ ಮುಖಂಡರಾದ ಪಿ.ವಿ. ಲೋಕೇಶ್, ಎಚ್.ಎಂ.ರೇಣುಕಾ ರಾಧ್ಯ, ಜಿ.ರಘು, ಎಸ್.ವಿಜಯಕುಮಾರ್ ಮತ್ತಿತರರಿದ್ದರು.

ಜನರಲ್ಲಿ ಮೌಢ್ಯ ಬಿತ್ತುವ ಬಿಜೆಪಿ

ಉತ್ತರಾಖಾಂಡದಲ್ಲಿ ಮೇಘಸ್ಪೋಟದಿಂದ ಹಳ್ಳಿಯೇ ಕೊಚ್ಚಿಕೊಂಡು ಹೋಗಿರುವ ಸಂದರ್ಭದಲ್ಲಿ ಅಲ್ಲಿನ ಸಚಿವರೊಬ್ಬರು ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿ ದಂದ ಮಾತೆಗೆ ನಿಮ್ಮ ಮೇಲೆ ಪ್ರೀತಿ. ಹಾಗಾಗಿ ಇಲ್ಲಿನ ಜನರನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗಿದ್ದಾಳೆ ಎಂದು ಹೇಳಿದ್ದಾರೆ. ಇದರಿಂದಲೇ ಬಿಜೆಪಿ ಮೌಲ್ಯವನ್ನು ಬಿತ್ತಿ ರಾಜಕಾರಣ ಮಾಡುತ್ತಿದೆ ಎಂದು ಸ್ಪಷ್ಟವಾಗುತ್ತದೆ ಎಂದು ಸಿದ್ದನಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಸ್ವರ್ಗಕ್ಕೆ ಹೋಗುವುದಿದ್ದರೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ಇದ್ದವರು ಹೋಗಲಿ. ಆದರೆ ಜನಸಾಮಾನ್ಯರು ಪ್ರಾಣ ಕಳೆದುಕೊಂಡಿರುವಾಗ, ಆಸ್ತಿಪಾಸ್ತಿ ನಷ್ಟವಾಗಿರುವ ಸಂದರ್ಭದಲ್ಲಿ ಸಚಿವರಾದವರು ಜನರ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದು ಹೇಳಿದರು.

ಬ್ರಿಟಿಷರ ಆಡಳಿತಾವಧಿಯಲ್ಲಿಯೂ ಆರ್ ಎಸ್ ಎಸ್ ಬ್ಯಾನ್ ಆಗಲಿಲ್ಲ. ಗಾಂಧಿಜಿ ಹತ್ಯೆ ಸಂದರ್ಭದಲ್ಲಿ ನೆಹರು ಸರ್ಕಾರ ಆರ್ ಎಸ್ ಎಸ್ ಬ್ಯಾನ್ ಮಾಡಲು ಹೊರಟಾಗ ಗೋಡ್ಸೆಗೂ ನಮಗೂ ಸಂಬಂಧವಿಲ್ಲ. ನಮ್ಮದು ಸಾಂಸ್ಕೃತಿಕ ಸಂಘ ಎಂದು ತಪ್ಪೊಪ್ಪಿಗೆ ಬರೆದುಕೊಟ್ಟು ಆರ್ ಎಸ್ ಎಸ್ ಬಚಾವಾಗಿತ್ತು. ಅದೇ ಸಿಪಿಐ ಪಕ್ಷವನ್ನು ಬ್ಯಾನ್ ಮಾಡಲು ಎಲ್ಲರೂ ಪ್ರಯತ್ನಪಟ್ಟಿದ್ದಾರೆ. ಆದರೆ ದೇಶದಲ್ಲಿನ ದುಡಿಯುವ ವರ್ಗ ಎಲ್ಲಿಯವರೆಗೆ ಸಂಕಷ್ಟದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಸಿಪಿಐ ಕೆಂಪು ಧ್ವಜ ಹಾರಿಸುತ್ತಲೇ ಇರುತ್ತದೆ.

ಡಾ.ಸಿದ್ದನಗೌಡ ಪಾಟೀಲ್, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ

ರಾಜ್ಯದಲ್ಲಿ ಕುಟುಂಬ ರಾಜಕಾರಣ ಇಂದು ಜನರ ಮುಂದೆ ಬೆತ್ತಲಾಗಿದೆ. ಇದಕ್ಕೆ ಹಾಸನದ ಮಾಜಿ ಸಂಸದರ ಪ್ರಕರಣವೇ ಸಾಕ್ಷಿ. ಕುಟುಂಬ ರಾಜಕಾರಣ ತೊಡೆದು ಹಾಕಿ ಜನರ ರಾಜಕಾರಣ ಕಟ್ಟಲು ಇದು ಸಕಾಲ. ಈ ಬಗ್ಗೆ ರಾಜ್ಯದ ಜನತೆ ಗಂಭೀರ ಚಿಂತನೆ ನಡೆಸಬೇಕು.

ಸಾತಿ ಸುಂದರೇಶ್, ಸಿಪಿಐ ರಾಜ್ಯ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net