

ಮೈಸೂರು: ರಾಜನೀತಿ ಜತೆಗೆ ಹಲವು ಬಗೆಯ ಸ್ವಾರಸ್ಯಕರ ಅಧ್ಯಯನದೊಂದಿಗೆ ಮನುಷ್ಯ ಅನುಸರಿಬೇಕಾದ ಬದುಕಿನ ಪದ್ಧತಿಗಳು ಪಂಚತಂತ್ರದಲ್ಲಿವೆ ಎಂದು ಶತಾವಧಾನಿ ಡಾ.ಆರ್.ಗಣೇಶ್ ಬಣ್ಣಿಸಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ ಹಾಗೂ ಬೆಂಗಳೂರಿನ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂಚತಂತ್ರದಲ್ಲಿನ ಸಾಂಸ್ಕೃತಿಕ ವಿಚಾರಗಳ ಕುರಿತು ಉಪನ್ಯಾಸ ನೀಡಿದರು.
ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ, ಪರಂಪರೆ ಶ್ರೀಮಂತವಾಗಿತ್ತು. ಹಲವು ನೀತಿ, ಜೀವನ ಸಾಮರಸ್ಯವನ್ನು ತಿಳಿಸುವ ಗ್ರಂಥಗಳು ಬಂದಿವೆ. ಹರಪ್ಪ-ಮೊಹೆಂಜೊದಾರೋ ಪ್ರಾಚೀನ ಕಾಲದಲ್ಲಿಯೇ ಭಾರತದ ಶ್ರೀಮಂತಿಕೆಯ ವೈಭವವನ್ನು ಪಂಚತಂತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಮಠಮಾನ್ಯಗಳು-ದೇವಸ್ಥಾನ, ಮನೆಗಳ ನಿರ್ಮಾಣಗಳು ಬಹಳ ವಿಶೇಷವಾಗಿ ವಿನ್ಯಾಸವಾಗಿದ್ದವು. ಕೇವಲ ಮಣ್ಣು, ಮರಗಳನ್ನು ಬಹಳಸಿಕೊಂಡು ಸಂಪ್ರದಾಯಬದ್ಧವಾಗಿ ನಿರ್ಮಿಸಿಕೊಳ್ಳುತ್ತಿದ್ದರು. ಆಭರಣಗಳ ವಿನ್ಯಾಸವೂ ಬಹಳ ಅಪರೂಪವಾಗಿತ್ತು. ಅರಗಿನ ಮೂಲಕ ಒಡವೆಗಳನ್ನು ತಯಾರಿಸಿ ಧರಿಸುತ್ತಿದ್ದರು ಎಂದು ಹೇಳಿದರು.
ಪ್ರಾಚೀನ ಕಾಲದ ಸಂಗೀತಾಭ್ಯಾಸದ ಮಹ್ವತ ಸಾರಲಾಗಿತ್ತು. ವೇಣು, ಮೃದಂಗ, ಹಾವಾಡಿಗರು ಬಳಸುತ್ತಿದ್ದ ಪುಂಗಿ ಇನ್ನೂ ಅನೇಕ ಸಾಧನ-ಸಲಕರಣೆಗಳು ಬಳಕೆಯಲ್ಲಿದ್ದವು ಎನ್ನುವುದರ ಜತೆಗೆ ಸಂಗೀತದ ಸ್ವಾರಸ್ಯದ ಬಗ್ಗೆ ಉಲ್ಲೇಖವಿದೆ. ಆಹಾರ ಸಂಸ್ಕೃತಿಯಲ್ಲೂ ಸ್ವಾರಸ್ಯಗಳಿದ್ದವು ಎಂದರು.
ಆದರೆ ದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಸಾಮರಸ್ಯವನ್ನು ಕದಡಿ ದೇಶ ಮತ್ತಷ್ಟು ವಿಭಜನೆ ಅಗಬೇಕು ಎನ್ನುವ ದೇಶದ್ರೋಹ, ವಿಚ್ಛಿದ್ರಕಾರಿ ಶಕ್ತಿಗಳು ಕೆರಳುತ್ತಿವೆ. ಪುಣ್ಯವಂತರು ಯಾರೂ ದೇಶ ವಿಭಜನೆಗೆ ಒಪ್ಪುವುದಿಲ್ಲ. ಈಗಲೂ ದೇಶಭಕ್ತರಲ್ಲಿ ಆ ನೋವಿದೆ. ಆದರೆ ದೇಶ ವಿಭಜನೆಯ ನೋವನ್ನು ಅನುಭವಿಸದವರಿಗೆ ಸಂಕಟ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸನಾತನ ಧರ್ಮದಲ್ಲಿ ಸರ್ವರ ಹಿತ ಬಯಸುವ ಪರಂಪರೆಗೆ ಕ್ಷಯ ಆಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಸನಾತನ ಧರ್ಮವನ್ನು ಅನುಸರಿಸುವುದಕ್ಕಿಂತ ಬೇರೆ ಪುಣ್ಯವೊಂದಿಲ್ಲ. ಮುಂದಿನ ಪೀಳಿಗೆ ಇದನ್ನು ನೋಡಬೇಕು. ದೇಶ ಪ್ರೇಮ ಬೆಳಗಬೇಕು. ಇದು ನಮ್ಮ ಪಂಚತಂತ್ರದಲ್ಲಿದೆ. ಮಕ್ಕಳಲ್ಲಿ ಈಗಿನಿಂದಲೇ ನಮ್ಮ ಧರ್ಮಗ್ರಂಥಗಳ ಜತೆಗೆ ಪಂಚತಂತ್ರದ ನೀತಿಗಳನ್ನು ತಿಳಿಸಿಕೊಡಬೇಕಿದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ.ಮಧುಸೂದನಾಚಾರ್ಯ, ಉಪ ನಿರ್ದೇಶಕಿ ಡಾ.ಸಿ.ಪಾರ್ವತಿ, ಬೆಂಗಳೂರಿನ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಿ.ಮಹೇಂದ್ರ ಇತರರು ಇದ್ದರು.