ಚಾಮರಾಜನಗರ: ದೇಶದ ರಾಜಕಾರಣ ಮುಂದಿನ ದಿನಗಳಲ್ಲಿ ಯುಜನಾಂಗದ ಕೈಗೆ ಹೋಗಲಿದ್ದು, ಉತ್ತಮ ರಾಜಕಾರಣಕ್ಕೆ ಯುವಜನರೇ ಭರವಸೆಯಾಗಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮತ್ತು ಜಿಲ್ಲಾ ಉಸ್ತುವಾರಿ ಸುದರ್ಶನ್ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಯುವ ಸಂಕಲ್ಪ ಕಾರ್ಯಕ್ರಮ ಹಾಗೂ ಯುವಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ರಾಜಕೀಯ ಚಿತ್ರಣ 2028 ಕ್ಕೆ ಸಂಪೂರ್ಣವಾಗಿ ಬದಲಾಗಲಿದೆ. ಮಹಿಳೆಯರು ಮತ್ತು ಯುಜನಾಂಗದ ಕೈಗೆ ದೇಶದ ರಾಜಕಾರಣ ವರ್ಗಾವಣೆಯಾಗಲಿದೆ. ಆಗಾಗಿ ವಿದ್ಯಾರ್ಥಿ ಚಳುವಳಿಯನ್ನು ಸದೃಢವಾಗಿ ಕಟ್ಟಬೇಕಿದೆ. ಜನರ ಭಾವನೆಗಳ ಜತೆಗೆ ರಾಜಕಾರಣ ಮಾಡುತ್ತಾ, ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟ ರೂಪಿಸುವಲ್ಲಿ ಯುವ ಕಾಂಗ್ರೆಸ್ ಪಾತ್ರ ಬಹುಮುಖ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜನರ ಬದುಕನ್ನು ಸುಧಾರಿಸಿದೆ. ಕಾಂಗ್ರೆಸ್‌ನ ಜನಪರವಾದ ಕಾರ್ಯಕ್ರಮಗಳ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಯುವಕರು ಮುಖ್ಯವಾಹಿನಿಗೆ ಬರಲು ರಾಜಕಾರಣದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡಬೇಕು. ಆಗಾಗಿ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಇನ್ನಿತರೆ ಸ್ಥಳೀಯ ಚುನಾವಣೆಗಳನ್ನು ನಡೆಸುವತ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ, ಜನರ ಮನಸ್ಸನ್ನು ಗೆಲ್ಲುವವರು ಯಾರಾದರೂ ರಾಜಕಾರಣ ಮಾಡಬಹುದು. ಅಂತೆಯೇ ಯುವ ಕಾಂಗ್ರೆಸ್‌ನಿಂದ ಬೆಳೆದು ಬಂದವರು ರಾಜಕಾರಣದಲ್ಲಿ ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಯುವ ಕಾಂಗ್ರೆಸ್ ಸುಭದ್ರವಾಗಿದ್ದರೇ ಮಾತ್ರ, ಪಕ್ಷ ಸುಭದ್ರವಾಗಿರುತ್ತದೆ ಎಂದರು.
ಈ ವೇಳೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ ಜಿ.ಎನ್.ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಿಲಿಂದ್ ಧರ್ಮಸೇನಾ, ಎಸ್.ಸಿ.ಬಸವರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ), ಮುಖಂಡರಾದ ಸದಾಶಿವ ಮೂರ್ತಿ, ಶಿವಕುಮಾರ್, ಯೋಗೇಶ್, ಕೆರೆಹಳ್ಳಿ ನವೀನ್, ಬಿ.ಕೆ.ರವಿಕುಮಾರ್, ರಫಿಕ್ ಅಹಮ್ಮದ್, ತೊಟೇಶ್, ಗುರುಸ್ವಾಮಿ, ಬಾಗಳಿ ರೇವಣ್ಣ, ಸೋಮೇಶ್, ಜಿ.ಎನ್.ಲೊಕೇಶ್, ಮರಿಸ್ವಾಮಿ, ಮಾಂಬಳ್ಳಿ ನಂಜುಂಡಸ್ವಾಮಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಯೋಗೇಂದ್ರ, ಮಾಜಿ ಜಿಲ್ಲಾಧ್ಯಕ್ಷ ಚೇತನ್ ದೊರೆರಾಜ್, ಸೈಯದ್ ಮುಸಾಯಿಬ್, ಅಕ್ಷಯ್ ಕುಮಾರ್ ಹಾಗೂ ಇತರರು ಹಾಜರಿದ್ದರು.
ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಇತ್ತೀಚೆಗೆ ವಿರೋಧ ಪಕ್ಷದವರು ಒಪ್ಪಿಕೊಂಡಿದ್ದಾರೆ. ಎಲ್ಲಾ ಪಕ್ಷದವರು ಕೂಡ ಗ್ಯಾರಂಟಿ ಯೋಜನೆ ಲಾನುಭವಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ಭರವಸೆಗಳನ್ನು ಈಡೇರಿಸುತ್ತಿದೆ. ಯುಜನಾಂಗದಲ್ಲಿ ಜಾಗೃತಿ ಮೂಡಿಸುವಲ್ಲಿ ಯುವ ಕಾಂಗ್ರೆಸ್ ಪಾತ್ರ ಅಪಾರವಾಗಿದೆ.
-ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ