ದೇಶದ ಭವಿಷ್ಯ ರೂಪಿಸುವ ಶಕ್ತಿ

sri trrr
ಶೃಂಗೇರಿಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ, ಗಂಗಾಧರಪ್ಪ, ರಮೇಶ್ ಭಟ್, ಶಿವಮೂರ್ತಿ, ನಾಗರಾಜ್, ಶಾರದಾ, ಮಮತಾ, ಮಂಜುನಾಥ್ ಇತರರಿದ್ದರು.
Published on

ಶೃಂಗೇರಿ: ಗುರು ಕೇವಲ ವ್ಯಕ್ತಿಯಲ್ಲ. ಮಕ್ಕಳಿಗೆ ಶಿಕ್ಷಣದ ಜತೆ ಜೀವನದ ಮೌಲ್ಯ ಕಲಿಸಿ ದೇಶದ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರು ನಿರಂತರ ಬೆಳಗುವ ದೀಪ. ಮಕ್ಕಳ ಅಜ್ಞಾನ ಹೋಗಲಾಡಿಸಿ ಸುಜ್ಞಾನ ನೀಡುವ ಅದ್ಭುತ ಶಕ್ತಿ. ಧರ್ಮ, ಅಹಿಂಸೆ, ಸತ್ಯ, ಸನ್ಮಾರ್ಗದ ಅರಿವನ್ನು ಮಕ್ಕಳಲ್ಲಿ ಪರಿಮೂಡಿಸಿ ಅವರ ಕನಸುಗಳನ್ನು ಸಾಕಾರಗೊಳಿಸುವ ಶಿಲ್ಪಿಗಳು. ಮಕ್ಕಳು ಸಾಧನೆ ಮಾಡಬೇಕಾದರೆ ಗುರಿಯ ಜತೆ ಗುರುವಿನ ಮಾಗದರ್ಶನ ಅವಶ್ಯ ಎಂದರು.

ಸರ್ಕಾರ ಮಕ್ಕಳ ಕ್ರಿಯಾಶೀಲತೆಗೆ ಕ್ರೀಡಾಕೂಟ, ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸುತ್ತಿದೆ. ಶಿಕ್ಷಕರು ಒತ್ತಡದ ನಡುವೆ ಕೆಲಸ ಮಾಡುತ್ತಿದ್ದರೂ ವಿದ್ಯಾರ್ಥಿಗಳ ಪಾಲಿಗೆ ಆದರ್ಶರಾಗಿರುತ್ತಾರೆ. ಸರ್ಕಾರ ರಾಜ್ಯದ 4134 ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಪ್ರಾರಂಭಿಸಿದೆ. 550 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಿಗೆ ಅನುಮೋದನೆ ನೀಡಿದೆ. ಏಳನೇ ವೇತನ ಆಯೋಗದ ಜತೆ ಶಿಕ್ಷಕರಿಗೆ ಉತ್ತಮ ಸೌಕರ್ಯ ನೀಡಲು ಸರ್ಕಾರ ಪ್ರಾಮಾಣಿಕ ಕೆಲಸ ಮಾಡುತ್ತಿದೆ ಎಂದರು.

ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಮಾತನಾಡಿ, ಶಿಕ್ಷಕರಿಗೂ ಹಲವು ಸಮಸ್ಯೆಗಳು ಇವೆ. ಪರಿಹಾರ ನೀಡುವ ನಿಟ್ಟಿನಲ್ಲಿ ಸಂಘ ಸದಾ ನಿಮ್ಮ ಜತೆಗಿರುತ್ತದೆ ಎಂದರು.

ನಿವೃತ್ತ ಶಿಕ್ಷಕರಾದ ಎಸ್.ಎಲ್.ರಾಘವೇಂದ್ರ, ಬಾಬುಗೌಡ ಪಾಟೀಲ್, ಬಿ.ವನಜಾಕ್ಷಿ, ಎನ್.ಸುರೇಶ್, ಎಚ್.ಕೆ.ಶಾರದಮ್ಮ ಅವರನ್ನು ಶಾಸಕ ಟಿ.ಡಿ.ರಾಜೇಗೌಡ ಸನ್ಮಾನಿಸಿದರು. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶಾಲೆಗಳನ್ನು ಅಭಿನಂದಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವೇದಿಕೆ ಗಣ್ಯರು ಬಹುಮಾನ ವಿತರಿಸಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮರಾಜ್, ಬಿಇಒ ವರಲಕ್ಷ್ಮೀ, ತಾಪಂ ಇಒ ಸುದೀಪ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಜಿ.ನಾಗೇಶ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಉಪಾಧ್ಯಕ್ಷೆ ಸುನೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net