

ಕಲಬುರಗಿ: ದೇಶದ ಆರ್ಥಿಕ ಅಭಿವೃದ್ಧಿಗೆ ಶೇ.೨೯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ)ಗಳ ಕೊಡುಗೆ ಇದ್ದು, ೧೨ ಕೋಟಿ ಉದ್ಯೋಗ ಸೃಷ್ಟಿಸಿವೆ. ಕೃಷಿ ಹೊರತುಪಡಿಸಿ ಅತಿ ಹೆಚ್ಚು ಉದ್ಯೋಗಗಳನ್ನು ಈ ಕ್ಷೇತ್ರ ನೀಡಿದೆ. ದೇಶದ ಶೇ.೫೦ರಷ್ಟು ರಫ್ತು ಎಂಎಸ್‌ಎಂಇಯಿಂದಲೇ ಆಗುತ್ತಿದೆ ಎಂದು ಚೆನ್ನೆನ ಭಾರತೀಯ ಚಾರ್ಟೆಡ್ ಅಕೌಂಟೆಟ್ಸ್ ಸಂಸ್ಥೆಯ ಅಧ್ಯಕ್ಷ ಪನ್ನಾ ರಾಜ್ ತಿಳಿಸಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಭಾರತೀಯ ಚಾರ್ಟೆಡ್ ಅಕೌಂಟೆಟ್ಸ್ ಸಂಸ್ಥೆ, ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಸ್ಟಾರ್ಟ್ಪ್ ಸಮಾವೇಶದಲ್ಲಿ ಮಾತನಾಡಿದರು.
ದೇಶದಲ್ಲಿ ೨೦೨೩ರವೇಳೆಗೆ ಜನನ ಪ್ರಮಾಣ ಕ್ಷೀಣಿಸುತ್ತಿದ್ದು, ವಯೋವೃದ್ಧರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ ದೇಶವನ್ನು ಕಟ್ಟುವ ಜವಾಬ್ದಾರಿ ಯುವ ಪೀಳಿಗೆಯ ಕೈಯಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರು ೨೦೨೫ಕ್ಕೆ ಭೌಗೋಳಿಕವಾಗಿ ಇನ್ನು ಶೇ.೫೭ರಷ್ಟು ವೃದ್ಧಿಯಾಗಲಿದೆ. ಒಂದೆಡೆ ಕೇಂದ್ರೀತವಾಗಿರುವ ಈ ವ್ಯವಸ್ಥೆಯನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ದೇಶದ ಆರ್ಥಿಕ ಪ್ರಗತಿ ಶೇ.೭ರಷ್ಟಿದ್ದರೂ, ಕೆಲವೇ ಜನರ ಕೈಯಲ್ಲಿ ಸಂಪತ್ತು ಕ್ರೋಡೀಕರಣವಾಗಿದೆ. ದೇಶದಲ್ಲಿ ಖಾಸಗೀಕರಣ, ಉದಾರಿಕರಣ, ಜಾಗತೀಕರಣದ ಪರಿಣಾಮದಿಂದ ಮಹತ್ತರ ಬದಲಾವಣೆಗಳಾದವು. ಆದರೆ ಶೇ.೪೦ರಷ್ಟು ಸಂಪತ್ತು ಶೇ.೧ರಷ್ಟು ಜನರ ಕೈಯಲ್ಲಿದೆ. ಇದು ಇತರಿಗೆ ದೊರೆಯಬೇಕು ಎಂದರೆ ಎಂಎಸ್‌ಎಂಇ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಸಮಾವೇಶದ ನಿರ್ದೇಶಕ ಸಿಎ ಎಸ್.ಎಸ್.ನಾಯಕ್ ಮಾತನಾಡಿ, ದೊಡ್ಡ ದೊಡ್ಡ ಕೈಗಾರಿಕೆಗಳು ಇದ್ದರೆ ಸಾಲದು. ಸಣ್ಣ, ಮಧ್ಯಮ ಕೈಗಾರಿಕೆಗಳು ಕೂಡಿದರೆ ಅಭಿವೃದ್ಧಿ ಆಗುತ್ತದೆ. ಉದ್ಯೋಗಕ್ಕಾಗಿ ಹುಡುಕಾಟ ಬೇಡ, ಉದ್ಯೋಗದಾತರಾಗಬೇಕು. ಸಣ್ಣದಾಗಿ ಆರಂಭಿಸಿ, ಉದ್ಯೋಗಪತಿಗಳಾಗಬೇಕು. ಉದ್ಯೋಗ, ಉದ್ಯಮಿಗಳಿಗೆ ದಾರಿದ್ರ್ಯ ಇಲ್ಲ. ಶ್ರದ್ಧೆ ಭಕ್ತಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್ ಮಾತನಾಡಿ, ನಮ್ಮ ಭಾಗದ ಜನಪ್ರತಿನಿಧಿಗಳು ಕೈಗಾರಿಕೆಗಳು ಮೇಲೆರಲು ಹಿಂದೆ ತುಳಿಯುತ್ತಿದ್ದಾರೆ. ಆದ್ದರಿಂದ ನಾವೇ ಜಾಗೃತರಾಗಬೇಕು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಕಲಬುರಗಿ ಅಭಿವೃದ್ಧಿಯಾಗಿದ್ದು, ಕೈಗಾರಿಕಾ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.
ಭಾರತೀಯ ಚಾರ್ಟೆಡ್ ಅಕೌಂಟೆಟ್ಸ್ ಸಂಸ್ಥೆ ಜಿಲ್ಲಾಧ್ಯಕ್ಷ ಸಿಎ ಮಲ್ಲಿಕಾರ್ಜುನ ಮಹಾಂತಗೋಳ ಸ್ವಾಗತಿಸಿದರು. ಕೆಕೆಐಸಿಐ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಪ್ರವೀಣ ನಂದಿ ಇತರರಿದ್ದರು. ಐಸಿಎಐ ಕಾರ್ಯದರ್ಶಿ ಸಿಎ ಮಾಣಿಕ್ ಮಂದಕನಳ್ಳಿ ವಂದಿಸಿದರು.