ದೇಶದ ಒಗ್ಗಟ್ಟು ಎಲ್ಲರಿಗೂ ಮಾದರಿ, ತಹಸೀಲ್ದಾರ್ ಕೆ.ಮಂಜುನಾಥ್ ಅಭಿಮತ, ವಿವಾದಕ್ಕೆ ಆಸ್ಪದ ನೀಡದಂತೆ ಮನವಿ

12 Nela Ph 02 Meeting Web 02
Published on

ನೆಲಮಂಗಲ: ಸಮಾಜದಲ್ಲಿ ಸಂವಿಧಾನ ಬದ್ಧವಾಗಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.

ನಗರದ ಸುಭಾಷ್‌ನಗರ ಬಳಿಯ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹಿಜಾಬ್-ಕೇಸರಿ ವಿವಾದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಶನಿವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಪ್ರತಿಯೊಬ್ಬ ಭಾರತೀಯನೂ ಸಂವಿಧಾನದ ಮೌಲ್ಯ ಅನುಸರಣೆ ಮಾಡುವ ಉತ್ತಮ ಪ್ರಜೆಯಾಗಬೇಕು. ಯಾವುದೇ ಜಾತಿ, ಧರ್ಮ, ವರ್ಗದ ಭೇದವಿಲ್ಲದೆ ಒಂದೇ ತಾಯಿ ಮಕ್ಕಳಂತೆ ನಡೆದುಕೊಂಡು ಬರುತ್ತೀದ್ದೇವೆ. ದೇಶದ ಒಗಟ್ಟು ನೆರೆಹೊರೆ ರಾಷ್ಟ್ರಗಳಿಗೂ ಮಾದರಿಯಾಗಿದೆ ಎಂದರು.

15 ದಿನಗಳಿಂದ ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗಲಭೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರ ಪ್ರಚೋದನಕಾರಿ ಮಾತಿಗೆ ಕಿವಿಗೊಡಬಾರದು. ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಹಿಜಾಬ್ ಮತ್ತು ಕೇಸರಿ ವಿಚಾರ ಹಲವಾರ ತಿರುವು ಪಡೆದುಕೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದು, ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಪಾಲಕರು ಎಚ್ಚೆತ್ತುಕೊಂಡು ಮಕ್ಕಳಿಗೆ ತಿಳಿ ಹೇಳಬೇಕು ಎಂದರು.

ತಾಲೂಕಿನಲ್ಲಿ ಅಹಿತಕರ ಘಟನೆಗಳು ಸಂಭವಿಸಿಲ್ಲ. ಪ್ರತಿಯೊಬ್ಬರೂ ಸಹೋದರ ಮನೋಭಾವದಿಂದ ಇದ್ದಾರೆ. ಮುಂದೆಯೂ ಈ ಸಂಬಂಧ ಹೀಗೆಯೇ ಮುಂದುವರಿಯಬೇಕು. ವಿವಾದವನ್ನು ಮನಗಂಡು ಜಿಲ್ಲಾಡಳಿತ ತಾಲೂಕಿನಲ್ಲಿ ಮುಖಂಡರೊಂದಿಗೆ ಶಾಂತಿಸಭೆ ನಡೆಸುವಂತೆ ಆದೇಶದ ನೀಡಿದ್ದ ಹಿನ್ನೆಲೆಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.

ಡಿವೈಎಸ್‌ಪಿ ಗೌತಮ್ ಮಾತನಾಡಿ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಸಮಾಜದ ಸೌಹಾರ್ದತೆಗೆ ಧಕ್ಕೆ ತರುವಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಹಿತಕರ ಸಂಘಟನೆಗಳು ಸಂಬಂವಿಸಿದರೆ ಪೊಲೀಸ್ ಇಲಾಖೆಯ ಸಹಾಯವಾಣಿ 112 ಗೆ ಕರೆ ಮಾಡಿದರೆ, ಸಮಸ್ಯೆಗೆ ಸ್ಪಂದಿಸಲಾಗುವುದು ಎಂದರು.

ನಗರಸಭೆ ನಾಮನಿರ್ದೇಶಿತ ಸದಸ್ಯ ಕೆ.ವಸಂತ್, ಜಿಪಂ ಯೋಜನಾಧಿಕಾರಿ ಎಂ.ಆರ್.ನರಸಿಂಹ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಗ್ರಾಮಾಂತರ ಜಿಲ್ಲಾ ಅಭಿಯಂತೆ ಸವಿತಾ, ತಾಪಂ ಕಾರ್ಯನಿರ್ವಣಾಧಿಕಾರಿ ಮೋಹನ್‌ಕುಮಾರ್, ಸಹಾಯಕ ನಿರ್ದೇಶಕಿ ಗೀತಾಮಣಿ, ಕ್ಷೇತ್ರಶಿಕ್ಷಣಾಧಿಕಾರಿ ಕೆ.ಸಿ.ರಮೇಶ್, ಎಸ್‌ಐ ಈರಮ್ಮ, ಕುವೆಂಪು ಸಹಕಾರ ಬ್ಯಾಂಕ್ ನಿರ್ದೇಶಕ ವೆಂಕಟೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ, ಅಕ್ಷರದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net