ದೇಶದ ಉಳಿವು ಕಾಂಗ್ರೆಸ್​ನಿಂದ ಮಾತ್ರ ಸಾಧ್ಯ : ಮಾಜಿ ಸಚಿವ ಪಿಜಿಆರ್​ ಸಿಂಧ್ಯಾ ಹೇಳಿಕೆ, ಬಿಡದಿಯಲ್ಲಿ ಕೈ ನವಸಂಕಲ್ಪ ಚಿಂತನಾ ಶಿಬಿರ

1
Published on

ಬಿಡದಿ: ರಾಜ್ಯದಿಂದ ದೆಹಲಿವರೆಗೂ ಕಾಂಗ್ರೆಸ್​ ಸರ್ಕಾರವನ್ನು ಅಧಿಕಾರಕ್ಕೆ ತರುವ ಕೆಲಸವಾಗಬೇಕಾಗಿದ್ದು, ದೇಶದ ಉಳಿವು ಕಾಂಗ್ರೆಸ್​ನಿಂದ ಮಾತ್ರ ಸಾಧ್ಯ ಎಂದು ಮಾಜಿ ಸಚಿವ ಪಿ.ಜಿ.ಆರ್​.ಸಿಂಧ್ಯಾ ಹೇಳಿದರು.

ಬಿಡದಿಯ ಮ್ಯಾಗ್ನೋಲಿಯಾ ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಹಮ್ಮಿಕೊಂಡಿದ್ದ ನವಸಂಕಲ್ಪ ಚಿಂತನಾ ಶಿಬಿರ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಅಧಿಕಾರದ ಆಸೆಗೆ ಇ.ಡಿ., ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ದೇಶದಲ್ಲಿ ವಿರೋಧ ಪಕ್ಷಗಳನ್ನು ಮಣಿಸುವ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳಲ್ಲಿ ಯಾರು ಮುಂಚೂಣಿಯಲ್ಲಿ ಕಾಣಿಸುತ್ತಾರೋ ಅಂತಹವರನ್ನು ಗುರಿ ಮಾಡಿ ದಾಳಿ ಮಾಡಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಸಾವಿರಾರು ವರ್ಷಗಳ ಇತಿಹಾಸ ಇರುವ ರಾಷ್ಟ್ರ ನಮ್ಮದು. ದೇಶವನ್ನು ಹಿಂದು ರಾಷ್ಟ್ರ ಮಾಡಬೇಕು ಎಂದು ಬಿಜೆಪಿಯವರು ಹೊರಟಿದ್ದಾರೆ. ಇಸ್ಲಾಂ ಧರ್ಮವನ್ನು ದ್ವೇಷ ಮಾಡುವ ಕೆಲಸಕ್ಕೆ ಇಳಿದಿದ್ದಾರೆ. ಇದು ಹೀಗೆ ಮುಂದುವರಿದರೆ ದೇಶಕ್ಕೆ ಅಪಾಯ. ಹಾಗಾಗಿ ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಿದೆ ಎಂದು ಪಕ್ಷದ ಮುಖಂಡರಿಗೆ ತಾಕೀತು ಮಾಡಿದರು.

ನಾನು ಕಾಂಗ್ರೆಸ್​ಗೆ ಹೊಸಬ. ಆದರೆ, ನಮ್ಮ ಕುಟುಂಬ ಕಾಂಗ್ರೆಸ್​ ಜತೆಗೆ ನಂಟು ಹೊಂದಿತ್ತು. ಇವತ್ತಿನ ಪರಿಸ್ಥಿತಿಯಲ್ಲಿ ದೇಶಕ್ಕೆ ಕಾಂಗ್ರೆಸ್​ ಅನಿವಾರ್ಯವಾಗಿದೆ. ಹಾಗಾಗಿ ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇನೆ ಎಂದರು.

ಶಿಬಿರದಲ್ಲಿ ಮಾಜಿ ಶಾಸಕರಾದ ಎಚ್​.ಸಿ. ಬಾಲಕೃಷ್ಣ, ಕೆ.ರಾಜು, ವಿಧಾನ ಪರಿಷತ್​ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್​.ರವಿ, ಬಮುಲ್​ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್​ ಹುಸೇನ್​, ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಗಂಗಾಧರ್​, ಮಹಿಳಾ ಕಾಂಗ್ರೆಸ್​ ಜಿಲ್ಲಾಧ್ಯಕ್ಷೆ ಪಾರ್ವತಮ್ಮ, ಗಾಣಕಲ್​ ನಟರಾಜ್​, ಪಂಚಮಿ ಪ್ರಸನ್ನ, ಉಮೇಶ್​ ಮುಂತಾದವರು ಭಾಗವಹಿಸಿದ್ದರು.

ಸುಳ್ಳು ಹೇಳಿ 8 ವರ್ಷ ಅಧಿಕಾರ: ಶಿಬಿರದ ಧ್ವಜಾರೋಹಣ ನೆರವೇರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಅಭಿವೃದ್ಧಿಯಲ್ಲಿ ದೇಶ ಹಿಂದೆ ಬಿದ್ದಿದೆ. ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ಮುಂದು, ಹಾಗಾಗಿ ಅವರಿಗೆ ನೊಬೆಲ್​ ಪ್ರಶಸ್ತಿ ನೀಡಬೇಕಾಗಿದೆ. ಈಗಾಗಲೇ ಸುಳ್ಳು ಹೇಳಿ 8 ವರ್ಷ ಅಧಿಕಾರ ಮಾಡಿದ್ದಾರೆ ಎಂದು ಕುಟುಕಿದರು.

ಸುಳ್ಳನ್ನು ಅಳಿಸುವವರೆಗೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸಾಧ್ಯವಿಲ್ಲ ಎಂದ ಅವರು, ಕಾಂಗ್ರೆಸ್​ ದೇಶದ ಸ್ವಾತಂತ್ರ$್ಯಕ್ಕಾಗಿ ಹೋರಾಟ ಮಾಡಿದೆ. ಆದರೆ, ಆರೆಸ್ಸೆಸ್​, ವಿಎಚ್​ಪಿ, ಹಿಂದು ಮಹಾಸಭಾದವರು ಸ್ವಾತಂತ್ರ$್ಯ ಹೋರಾಟದಲ್ಲಿ ಭಾಗಿಯಾಗಿದ್ದರಾ ಎಂದು ಪ್ರಶ್ನಿಸಿದರು.

ಸಾಲ ಮಾಡುವುದೇ ಮೋದಿ ಕಾಯಕ: ಪ್ರಧಾನಿ ನರೇಂದ್ರ ಮೋದಿ ಸಾಲ ಮಾಡುವುದರಲ್ಲಿ ಎತ್ತಿದ ಕೈ. ಈ ಹಿಂದಿನ 67 ವರ್ಷದಲ್ಲಿ ಅಧಿಕಾರ ನಡೆಸಿದವರು 53 ಲಕ್ಷ ಕೋಟಿ ರೂ. ಸಾಲ ಮಾಡಿದ್ದರು. ಆದರೆ ಮೋದಿ ಅಧಿಕಾರಕ್ಕೆ ಬಂದ 8 ವರ್ಷದಲ್ಲಿ 103 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಅಂಕಿ ಅಂಶದ ಮೂಲಕ ಆರೋಪ ಮಾಡಿದರು.

ಬಿಜೆಪಿಯಿಂದ ದೇಶದಲ್ಲಿ ಅಭದ್ರತೆ ಸೃಷ್ಟಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸದ ಡಿ.ಕೆ.ಸುರೇಶ್​ ಮಾತನಾಡಿ, ಬಿಜೆಪಿ ಧರ್ಮದ ಹೆಸರಿನಲ್ಲಿ ಭಾವನೆಗಳನ್ನು ಕೆರಳಿಸಿ ಜನರ ಜೀವನದ ಜತೆ ಆಟವಾಡುತ್ತಿದೆ. ದೇಶದಲ್ಲಿ ಅಭದ್ರತೆ ಸೃಷ್ಟಿಸಿ ಸಂವಿಧಾನವನ್ನು ತಿರುಚುವ ಕೆಲಸ ಮಾಡುತ್ತಿದೆ ಎಂದರು.

ಕಾಂಗ್ರೆಸ್​ ಸಂಟನೆ ಮಾಡುವ ದೃಷ್ಟಿಯಿಂದ ಚಿಂತನಾ ಶಿಬಿರ ಆಯೋಜಿಸಲಾಗಿದೆ. ಬಿಜೆಪಿಯ ವೈಲ್ಯಗಳನ್ನು ಮನೆಮನೆಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ. ಜತೆಗೆ ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್​ ಯಾವ ರೀತಿ ಆಡಳಿತ ನೀಡಿದೆ ಎಂಬುದನ್ನೂ ತಿಳಿಸುವ ಕೆಲಸ ಎನ್ನುವುದನ್ನೂ ಜನರಿಗೆ ತಿಳಿಸುವ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕತರು ಮಾಡಬೇಕಿದೆ ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರೆ. ಅವರ ವಿಚಾರಧಾರೆಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಇದೀಗ ಅಗ್ನಿಪಥ್​ ಹೆಸರಿನಲ್ಲಿ ದೇಶದ ಯುವಕರನ್ನು ಗುತ್ತಿಗೆ ಅಧಾರದಲ್ಲಿ ಸೈನ್ಯಕ್ಕೆ ಸೇರಿಸಿಕೊಳ್ಳುವ ಯೋಜನೆ ತಂದು ಯುವಕರಿಗೆ ಅವಮಾನ ಮಾಡಿದ್ದಾರೆ ಎಂದು ಡಿ.ಕೆ. ಸುರೇಶ್​ ಕಿಡಿಕಾರಿದರು.

ಅಕ್ಟೋಬರ್​ನಲ್ಲಿ ಪಾದಯಾತ್ರೆ: ಮುಂದಿನ ಅಕ್ಟೋಬರ್​ 2ರಂದು ಬೃಹತ್​ ಪಾದಯಾತ್ರೆಗೆ ರಾಹುಲ್​ ಗಾಂಧಿ ಅವರಿಂದ ಚಾಲನೆ ಸಿಗಲಿದೆ. ಕನ್ಯಾಕುಮಾರಿಯಿಂದ ಜಮ್ಮುಕಾಶ್ಮೀರದವರೆಗೆ 3800 ಕಿಲೋ ಮೀಟರ್​ ಪಾದಯಾತ್ರೆ ನಡೆಯಲಿದೆ. ಇದಕ್ಕಾಗಿ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ನಮ್ಮ ರಾಜ್ಯದಲ್ಲೂ 75 ಕಿಲೋಮೀಟರ್​ ಪಾದಯಾತ್ರೆ ಸಾಗಲಿದೆ ಎಂದು ಡಿ.ಕೆ. ಸುರೇಶ್​ ತಿಳಿಸಿದರು.

ರಾಜ್ಯದಲ್ಲೊಬ್ಬ ಸುಳ್ಳುಗಾರ: ದೇಶದಲ್ಲಿ ನರೇಂದ್ರ ಮೋದಿ ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದರೆ, ಅದೇ ರೀತಿ ರಾಜ್ಯದಲ್ಲೂ ಎಚ್​.ಡಿ. ಕುಮಾರಸ್ವಾಮಿ ಅವರು ಜನರಿಗೆ ಸುಳ್ಳು ಹೇಳಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಡದಿಯಲ್ಲಿ ಅವರ ಸುಳ್ಳಿನ ಫ್ಯಾಕ್ಟರಿ ಇದೆ. ಕಣ್ಣೀರು ಹಾಗೂ ಬೆವರು ಎರಡು ಒಂದೇ ಸಲ ಬರುತ್ತದೆೆ ಎಂದು ಸಂಸದ ಡಿ.ಕೆ.ಸುರೇಶ್​ ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net