ದೇಶದ ಉದ್ಧಾರಕ ಡಾ.ಅಂಬೇಡ್ಕರ್

Chakravarthy
Published on

ಬೀದರ್: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಜನಾಂಗದ ಅಭಿವೃದ್ಧಿಗಾಗಿ ಬದುಕು ಸವಿಸಿದ್ದಾರೆ ಎಂಬುದು ಅವರ ಬದುಕಿನ ಒಂದು ಭಾಗ ಮಾತ್ರ. ಆದರೆ ಅವರು ಅಖಂಡ ಭಾರತದ ಉದ್ಧಾರಕ್ಕಾಗಿ ಶ್ರಮಿಸಿದ್ದವರು. ಅವರು ಭಾರತದ ಉದ್ಧಾರಕ ಎಂದು ಖ್ಯಾತ ವಾಗ್ಮಿ, ವಿಜಯವಾಣಿ ಅಂಕಣಕಾರರಾದ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಸರಸ್ವತಿ ಶಾಲೆ ಗಿರಿಜಾ ಸಭಾ ಮಂಟಪದಲ್ಲಿ ಯುವಾ ಬ್ರಿಗೇಡ್ ಶನಿವಾರ ಏರ್ಪಡಿಸಿದ್ದ ವಕೀಲರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಒಂದು ಜಾತಿ, ವರ್ಗಕ್ಕೆ ಸೀಮಿತವಲ್ಲ. ಅವರು ಭಾರತದ ಸರ್ವಾಂಗೀಣ ಅಭಿವೃದ್ಧಿಯನ್ನು ಸಂವಿಧಾನದ ಮೂಲಕ ಮಾಡಿ ತೋರಿಸಿದ್ದಾರೆ ಎಂದರು.

ಜಗತ್ತಿನಲ್ಲಿ ನಾವೇ ಸಂವಿಧಾನ ರಕ್ಷಕರು, ಪ್ರಜಾಪ್ರಭುತ್ವದ ಪಾಲಕರು ಎಂದು ಹೇಳಿಕೊಳ್ಳುತ್ತಿದ್ದ ಅಮೆರಿಕದ ಪರಿಸ್ಥಿತಿ ಪ್ರಸ್ತುತ ಎನಾಗುತ್ತಿದೆ ಎಂಬುದು ವಿಶ್ವವೇ ನೋಡುತ್ತಿದೆ. ಅಲ್ಲಿ ಚುನಾವಣೆ ನಡೆದು ಒಂದೂವರೆ ತಿಂಗಳಾದರೂ ಗೊಂದಲ ನಿವಾರಣೆಯಾಗಿಲ್ಲ. ಆದರೆ ಭಾರತದಲ್ಲಿ ನಡೆಯುವ ಪಾರದರ್ಶಕ ಚುನಾವಣೆಗೆ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ. ನಮ್ಮ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಪ್ರಜಾಪ್ರಭುತ್ವ ಎಂದರೆ ದೊಡ್ಡ, ಶ್ರೀಮಂತ ರಾಷ್ಟ್ರ ಅಲ್ಲ. ಜನತೆ ದೇಶವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಮುಖ್ಯ. ಪ್ರಸ್ತುತ ಅಮೆರಿಕದಲ್ಲಿ ನಡೆದಿರುವ ಬೆಳವಣಿಗೆ ನೋಡಿದರೆ ಗೊತ್ತಾಗುತ್ತದೆ. ಪೂರ್ಣ ಅಮೆರಿಕಕ್ಕೆ ಒಳಗೊಂಡಂತೆ ಚುನಾವಣೆ ಆಯೋಗ ಅಲ್ಲಿಲ್ಲ. ಅಲ್ಲಿ ರಾಜ್ಯಕ್ಕೆ ಒಂದೊಂದು ಚುನಾವಣೆ ನೀತಿಗಳಿವೆ. ಆಯಾ ರಾಜ್ಯದವರು ತಮಗೆ ಅನುಕೂಲ ಆಗುವಂತ ಚುನಾವಣೆ ನಡೆಸುತ್ತಾರೆ. ಅಲ್ಲಿ ಚುನಾವಣೆ ಮೇಲೆ ನಿಯಂತ್ರಣ ಇಲ್ಲ. ಒಂದು ರಾಜ್ಯದಲ್ಲಿ ಒಂದೊಂದು ರೀತಿ ನೀತಿಗಳಿವೆ. ಹೀಗಾಗಿ ಅಧ್ಯಕ್ಷ ಚುನಾವಣೆ ಮುಗಿದು ಒಂದೂವರೆ ತಿಂಗಳು ಕಳೆದರೂ ಗೊಂದಲ ಮುಂದುವರಿದಿದೆ. ಆದರೆ ಭಾರತದಲ್ಲಿ ಈ ರೀತಿ ನಡೆದಿಲ್ಲ. ಇದಕ್ಕೆ ನಮ್ಮ ಸಂವಿಧಾನವೇ ಮೂಲ ಎಂದರು.

ಸ್ವಾತಂತ್ರ್ಯದ ಕಾಲಘಟಕ್ಕೆ ಭಾರತ ಬಂದಾಗ ದೇಶ ಮುನ್ನಡೆಸಿಕೊಂಡು ಹೋಗಲು ಸಂವಿಧಾನ ಇಲ್ಲ. ಹೇಗೆ ಮಾಡಬೇಕು ಎಂದು ಮಹಾತ್ಮ ಗಾಂಧೀಜಿ ಚಿಂತನೆಯಲ್ಲಿದ್ದಾಗ ಜವಾಹರಲಾಲ್ ನೆಹರು ಅವರು ಬ್ರಿಟಿಷ್ ತಜ್ಞರೊಬ್ಬರನ್ನು ಸಂವಿಧಾನ ಸಮಿತಿಗೆ ಮುಖ್ಯಸ್ಥರಾಗಿ ಮಾಡೋಣ ಎಂದು ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಗಾಂಧೀಜಿ, ಭಾರತಕ್ಕೆ ಸ್ವಾತಂತ್ರ್ಯ ಬೇಕು. ಆದರೆ ಸ್ವಂತ ಸಂವಿಧಾನ ರಚಿಸಲು ಭಾರತಕ್ಕೆ ಯೋಗ್ಯತೆ ಇಲ್ಲ ಎಂಬ ಸಂದೇಶ ಹೋಗುತ್ತದೆ. ಹೀಗಾಗಿ ಅಪಾರ ಜ್ಞಾನ ಹೊಂದಿರುವ ಡಾ.ಅಂಬೇಡ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಿ ಸಂವಿಧಾನ ರಚಿಸುವಂತೆ ಹೇಳಿದ್ದರು. ಹೀಗಾಗಿ ಗಾಂಧೀಜಿ ಆಶಯದಂತೆ ಅಂಬೇಡ್ಕರ್ ಅವರು ಭವ್ಯ ಭಾರತ ನಿರ್ಮಾಣಕ್ಕೆ ಸಂವಿಧಾನದ ಮೂಲಕ ಅಡಿಪಾಯ ಹಾಕಿದರು ಎಂದು ಹೇಳಿದರು.

ಪ್ರಸ್ತುತ ಅಮೆರಿಕದಲ್ಲಿ ನಡೆದಿರುವ ಚುನಾವಣೆ ರೀತಿ ಭಾರತದಲ್ಲೂ ಅಳವಡಿಸಿಕೊಳ್ಳುವ ವಿಚಾರ ಸಂವಿಧಾನ ರಚನೆ ವೇಳೆ ಕೇಳಿಬಂದಿತ್ತು. ಆದರೆ ಅಂಬೇಡ್ಕರ್ ಅದಕ್ಕೆ ನಿರಾಕರಣೆ ಮಾಡಿ, ದೇಶಕ್ಕೆ ಒಂದೇ ಚುನಾವಣೆ ಆಯೋಗ ರಚಿಸಿದರು. ಚುನಾವಣೆ ಆಯೋಗವು ಕೇಂದ್ರ, ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಇಡದೆ ಮುಕ್ತವಾಗಿಟ್ಟರು. ಚುನಾವಣೆ ಆರಂಭದಿಂದ ಘೋಷಣೆ ಮಾಡುವವರೆಗೆ ಸಂಪೂರ್ಣ ಅಧಿಕಾರ ಆಯೋಗಕ್ಕೆ ನೀಡಿದರು. ಹೀಗಾಗಿ ಇಡೀ ಜಗತ್ತು ಮೆಚ್ಚುವಂಥ ಚುನಾವಣೆ ನೀತಿ ಭಾರತದಲ್ಲಿದೆ ಎಂದರು.

ಚಕ್ರವರ್ತಿ ಎಂದರೆ ಮೋದಿ ಪರ ಎಂಬ ಮಾತಿದೆ. ನಮ್ಮದು ಯಾರ ಪರವೂ ಇಲ್ಲ. ಮೊದಲು ದೇಶದ ಪರ. ರಾಜ್ಯದಲ್ಲಿ ನೆರೆ ಪರಿಹಾರ ಬರದಿದ್ದಾಗ ಮೊದಲು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದ್ದು ಯುವಾ ಬ್ರಿಗೇಡ್. ದೇಶಾಭಿಮಾನ ಮೂಡಿಸುವುದೇ ಬ್ರಿಗೇಡ್ ಉದ್ದೇಶ ಎಂದು ಹೆಮ್ಮೆಯಿಂದ ಹೇಳಿದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ. ಪ್ರಕಾಶ ಇದ್ದರು. ನ್ಯಾಯವಾದಿ ಅಶೋಕ ಮಾನೂರೆ ಪ್ರಾಸ್ತಾವಿಕ ಮಾತನಾಡಿದರು. ಆಯೋಜಕ ವೀರೇಶ ಸ್ವಾಮಿ ಸ್ವಾಗತಿಸಿದರು. ಗುರುನಾಥ ರಾಜಗೀರಾ ನಿರೂಪಣೆ ಮಾಡಿದರು. ನೂರಾರು ವಕೀಲರು ಪಾಲ್ಗೊಂಡಿದ್ದರು.

ಏನೇ ಆದರೂ ಠಾಣೆಗೆ ಹೋಗಲ್ಲ…
ನಮಗೆ ಯಾವುದೇ ತೆರನಾದ ತೊಂದರೆಯಾದರೂ ಪೊಲೀಸ್ ಠಾಣೆಗೆ ಹೋಗಲ್ಲ ಎಂದು ದೇಶದ ಶೇ.40 ಜನ ಹೇಳಿದರೆ, ಯಾವುದೇ ಕಾರಣಕ್ಕೂ ನ್ಯಾಯವಾದಿಗಳ ಬಳಿಗೂ ಹೋಗಲ್ಲ ಎಂದು ಶೇ.30 ಜನರ ವಾದ. ನ್ಯಾಯಾಂಗ ವ್ಯವಸ್ಥೆ ದುಬಾರಿ ಎಂದು ದೇಶದ ಶೇ.70 ಜನ ಹೇಳುತ್ತಾರೆ. ಇದು ನನ್ನ ಅನಿಸಿಕೆ ಅಲ್ಲ, 2017ರಲ್ಲಿ ದಕ್ಷ ಎಂಬ ಎನ್ ಜಿಒ ಸಂಸ್ಥೆ ನಡೆಸಿದ ಸರ್ವೇ ವರದಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ದೇಶದಲ್ಲಿ ವ್ಯವಸ್ಥೆ ಹೇಗೆ ಎಂಬುದು ಈ ವರದಿಯಿಂದ ಗೊತ್ತಾಗುತ್ತದೆ. ಯಾರ ವಿರುದ್ಧ ಎಫ್ಐಆರ್ ಹಾಕಲು ಠಾಣೆಗೆ ಹೋದರೆ ನಮ್ಮ ವಿರುದ್ದವೇ ಪ್ರಕರಣ ದಾಖಲಾಗಬಹುದು. ಅಂಥ ವ್ಯವಸ್ಥೆ ನಮ್ಮಲ್ಲಿದೆ. ಇದು ಬದಲಾವಣೆ ಆಗಬೇಕಾಗಿದೆ. ಕಾನೂನು ಕುರಿತು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಭಾರತದ ವ್ಯಾಕ್ಸಿನ್ ಗೆ
184 ರಾಷ್ಟ್ರಗಳ ಬೇಡಿಕೆ…

ಕರೊನಾ ಸೋಂಕಿನ ವಿರುದ್ಧ ಲಸಿಕೆ ತಯಾರಿಸುವಲ್ಲಿ ಯಶಸ್ವಿಯಾಗಿರುವ ಭಾರತಕ್ಕೆ ವ್ಯಾಕ್ಸಿನ್ ಕೊಡಿ ಎಂದು ಜಗತ್ತಿನ 184 ರಾಷ್ಟ್ರಗಳು ಬೇಡಿಕೆ ಸಲ್ಲಿಸಿವೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಭಾರತಕ್ಕಿಂತ ಮೊದಲು ರಷ್ಯಾ, ಚೀನಾ, ಅಮೆರಿಕ ವ್ಯಾಕ್ಸಿನ್ ಬಿಡುಗಡೆ ಮಾಡಿವೆ. ಆದರೆ ಜಗತ್ತಿನ ಯಾವ ರಾಷ್ಟ್ರಗಳೂ ಈ ದೇಶಗಳಿಗೆ ನಿಮ್ಮ ಕಂಪನಿ ವ್ಯಾಕ್ಸಿನ್ ಕೊಡಿ ಎಂದು ಕೇಳಿಲ್ಲ. ಆದರೆ ಭಾರತಕ್ಕೆ 184 ರಾಷ್ಟ್ರಗಳು ನಮಗೆ ವ್ಯಾಕ್ಸಿನ್ ಕೊಡಿ ಎಂದು ಕೇಳುತ್ತಿವೆ. ಇದು ಭಾರತದ ಮೇಲಿರುವ ವಿಶ್ವಾಸ, ನಂಬಿಕೆ. ಭಾರತ ಅಪ್ಪಿತಪ್ಪಿಯೂ ಸುಳ್ಳು ಹೇಳಲ್ಲ ಎಂಬ ನಂಬಿಕೆ ಇಡೀ ಜಗತ್ತಿಗಿದೆ. ಈ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರವನ್ನು ಕಟ್ಟಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.

ಇಂದು ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಧ್ವನಿಯಾಗಿದ್ದೇ ಡಾ.ಅಂಬೇಡ್ಕರ್. ಭವ್ಯ ಭಾರತದ ನಿರ್ಮಾಣ ಪರಿಪೂರ್ಣ ಕಲ್ಪನೆಯೊಂದಿಗೆ ಸಂವಿಧಾನ ರಚನೆ ಮಾಡಲಾಗಿದೆ. ಅಂಬೇಡ್ಕರ್ ದೂರದೃಷ್ಟಿಯಿಂದಲೇ ಪ್ರಸ್ತುತ ಭವ್ಯ ಭಾರತ ನಿರ್ಮಿಸಲಾಗುತ್ತಿದೆ. ಬಾಬಾಸಾಹೇಬರು ಒಂದು ವರ್ಗಕ್ಕೆ ಸೀಮಿತವಲ್ಲ, ಅವರು ಭಾರತದ ನಿರ್ಮಾತೃ.| ಚಕ್ರವರ್ತಿ ಸೂಲಿಬೆಲೆಯುವಾ ಬ್ರಿಗೇಡ್ ಸಂಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net